ಶ್ರೀರಂಗಪಟ್ಟಣ ತಾಲೂಕು ಕಿರಂಗೂರು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಲೋಕಾಯುಕ್ತ ಪೊಲೀಸರು ಕಡತ ಪರಿಶೀಲಿಸಿ ಪಿಡಿಒ ಅವರಿಂದ ಮಾಹಿತಿ ಪಡೆದರು. 
ಮಂಡ್ಯ

ಗ್ರಾಪಂ, ತಾಪಂ ಕಚೇರಿ ಮೇಲೆ ಲೋಕಾ ದಾಳಿ

ಶ್ರೀರಂಗಪಟ್ಟಣ: ತಾಲೂಕಿನ ಕಿರಂಗೂರು ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕಾರ್ಯಾಲಯಕ್ಕೆ ಲೋಕಾಯುಕ್ತ ಪೊಲೀಸರು ಮಂಗಳವಾರ ಏಕಕಾಲದಲ್ಲಿ ಧಿಡೀರ್ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದರು.
ಪಟ್ಟಣದ ಹಳೇ ಸಂತೆ ಮೈದಾನ ಬಳಿಯ ತಾಪಂ ಕಾರ್ಯಾಲಯ ಹಾಗೂ ಕಿರಂಗೂರು ಗ್ರಾಮ ಪಂಚಾಯಿತಿಗೆ ಲೋಕಾಯುಕ್ತ ಎಸ್ಪಿ ಎಸ್.ಸುರೇಶ್ ಬಾಬು ಹಾಗೂ ಡಿವೈಎಸ್ಪಿ ಸುನೀಲ್ ಕುಮಾರ್ ನೇತೃತ್ವದಲ್ಲಿ ಎರಡು ತಂಡಗಳಲ್ಲಿ ಪೊಲೀಸರು ದಾಳಿ ನಡೆಸಿದರು.
ತಾಲೂಕಿನ ಕೆ.ಶೆಟ್ಟಹಳ್ಳಿ ಹೋಬಳಿ ಕಿರಂಗೂರು ಗ್ರಾಮದಲ್ಲಿ ಅಕ್ರಮವಾಗಿ ವಸತಿ ಬಡಾವಣೆ ಉದ್ದೇಶಕ್ಕೆ ನಕಲಿ ಬಹು ವಿನ್ಯಾಸ ನಕ್ಷೆ ತಯಾರಿಸಿ ಪ್ರತ್ಯೇಕ ನಿವೇಶಗಳನ್ನು ತೋರಿಸಿ ಕಿರಂಗೂರು ಗ್ರಾಮ ಪಂಚಾಯಿತಿಯಿಂದ ಅಕ್ರಮವಾಗಿ ಇ-ಸ್ವತ್ತು ಪಡೆದು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ನಷ್ಟ ಮಾಡಲಾಗಿದೆ ಎಂದು ಆರೋಪಿಸಿ ರೈತ ಹೋರಾಟಗಾರರೊಬ್ಬರು ಲೋಕಾಯುಕ್ತಕ್ಕೆ ಲಿಖಿತ ದೂರು ನೀಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಎರಡೂ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದರು. ವೇಳೆ ಕಿರಂಗೂರು ಗ್ರಾಪಂ ಮತ್ತು ತಾಲೂಕು ಪಂಚಾಯಿತಿ ಕಚೇರಿಯಲ್ಲಿದ್ದ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸಿದರು.
ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಬ್ಯಾಟರಾಯಗೌಡ, ರವಿಕುಮಾರ್, ಲೇಪಾಕ್ಷಿ ಮೂರ್ತಿ, ಸಿಬ್ಬಂದಿ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.