ಮಂಡ್ಯ ವಿಶ್ವವಿದ್ಯಾಲಯದ ಕಚೇರಿ ಸಭಾಂಗಣದಲ್ಲಿ ಯುವ ಸಂಭ್ರಮ ಕಾರ್ಯಕ್ರಮದ ಲೋಗೋವನ್ನು ಶಾಸಕ ಪಿ.ರವಿಕುಮಾರ್ ಗಣಿಗ ಬಿಡುಗಡೆಗೊಳಿಸಿದರು.
- ಕಾರ್ಯಕ್ರಮದ ಲೋಗೋ ಬಿಡುಗಡೆ
- ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ನವ ವಸಂತ-2026 ಸಮಾರಂಭ
ಮಂಡ್ಯ: ಮಂಡ್ಯ ವಿಶ್ವವಿದ್ಯಾಲಯ ಪ್ರಾರಂಭವಾಗಿ ಏಳು ವಸಂತಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಏ.30ರಂದು ನವ ವಸಂತ-2026 ಯುವ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ತಿಳಿಸಿದರು.
ನಗರದ ವಿಶ್ವವಿದ್ಯಾಲಯದ ಕಚೇರಿ ಸಭಾಂಗಣದಲ್ಲಿ ಕಾರ್ಯಕ್ರಮದ ಲೋಗೋ ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಿವಿ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಮಂಡ್ಯ ವಿವಿಗೆ ಒಳಪಡುವ 47 ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 40 ಜನರನ್ನು ಒಂದೆಡೆ ಸೇರಿಸಲಾಗುವುದು. ಈ ಮೂಲಕ ಮಂಡ್ಯ ನಗರದಲ್ಲಿ ಸ್ವಾಭಿಮಾನಿ ವಿಶ್ವವಿದ್ಯಾಲಯವಿದೆ ಎಂದು ತೋರಿಸಲಾಗುವುದು. ವಿಶ್ವವಿದ್ಯಾಲಯ ಸ್ಥಾಪನೆಯಾದ ನಂತರ ದೊಡ್ಡ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಉನ್ನತ ಶಿಕ್ಷಣ ಸಚಿವ ಸುಧಾಕರ್ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ 2 ಕೋಟಿ ರೂ ವೆಚ್ಚದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಅಂತೆಯೇ ಮೌಲ್ಯಮಾಪನ ಕಟ್ಟಡ, ಸ್ವಾಗತ ಕಮಾನನ್ನು ಉದ್ಘಾಟಿಸಲಾಗುವುದು. ಮಂಡ್ಯ ವಿವಿ ನವ ಚೈತನ್ಯ ಪಡೆದುಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ನವ ವಸಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ಹಿನ್ನೆಲೆಯಲ್ಲಿ ಏ.21ರಿಂದ 28ರವರೆಗೆ ಅಂತರ ಕಾಲೇಜು ನೃತ್ಯ ಪ್ರದರ್ಶನ ನಡೆಸಲಾಗುತ್ತಿದ್ದು, ಇದರಲ್ಲಿ ಆಯ್ಕೆಯಾದವರಿಗೆ ಯುವ ಸಂಭ್ರಮದಲ್ಲಿ ಅವಕಾಶ ನೀಡಲಾಗುವುದು. ಅಂದಾಜು 50 ಲಕ್ಷ ರೂ ವೆಚ್ಚವಾಗಲಿದ್ದು, ಮಂಡ್ಯ ವಿವಿಯಿಂದ 25 ಲಕ್ಷ ಭರಿಸಲಾಗುವುದು. ಉಳಿದ ಹಣವನ್ನು ಖಾಸಗಿಯಾಗಿ ವ್ಯಯಿಸಲಾಗುವುದು ಎಂದು ವಿವರಿಸಿದರು.
ಕಾರ್ಯಕ್ರಮದ ವ್ಯವಸ್ಥಾಪಕ ಧ್ರುವ ಮಾತನಾಡಿ, ಯುವ ಸಂಭ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕ ಚಂದನ್‌ಶೆಟ್ಟಿ ತಂಡ ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸ್ಥಳೀಯ ಕಲಾವಿದರಿಗೂ ಆದ್ಯತೆ ನೀಡಲಾಗುವುದು. ಯುವ ನಟ ಕಿಶನ್ ಸೇರಿದಂತೆ ಚಲನಚಿತ್ರ ನಟ-ನಟಿಯರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಮಂಡ್ಯ ವಿವಿ ಕುಲಸಚಿವ ವೆಂಕಟರಮಣ, ರಿಜಿಸ್ಟ್ರರ್ ಕೃಷ್ಣಕುಮಾರ್, ಆರ್ಥಿಕ ಸಲಹೆಗಾರ ಖಾದರ್ ಇತರರಿದ್ದರು.