ಮಂಡ್ಯದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ನಗರ ಸ್ಥಳೀಯ ಸಂಸ್ಧೆಗಳ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಲಾಗಿತ್ತು.
- ನಗರ ಸ್ಥಳೀಯ ಸಂಸ್ಥೆಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಿ
- ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ
ಮಂಡ್ಯ: ಸರ್ಕಾರ ರಾಜ್ಯಾದ್ಯಂತ ಘನ ತ್ಯಾಜ್ಯ ನಿರ್ವಹಣಾ ನಿಯಮಗಳು-2026 ಅನುಷ್ಠಾನಗೊಳಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವುದರಿಂದ ಸ್ವಚ್ಛ ಹಾಗೂ ಸುಂದರ ವಾತಾವರಣ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ನಗರ ಸ್ಥಳೀಯ ಸಂಸ್ಧೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರೋಗ್ಯಕರ ವಾತಾವರಣ ಮತ್ತು ರೋಗಮುಕ್ತ ಸಮಾಜಕ್ಕಾಗಿ ಘನತ್ಯಾಜ್ಯದ ಸಮರ್ಪಕ ವಿಲೇವಾರಿ ಅತ್ಯಂತ ಅಗತ್ಯ. ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವುದರಿಂದ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಪ್ರತಿ ಸ್ಥಳೀಯ ಸಂಸ್ಥೆಗಳಲ್ಲಿ ನಾಲ್ಕು ವಿಧಗಳ ತ್ಯಾಜ್ಯ ವಿಂಗಡಣೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಕಸ, ಒಣ ಕಸ, ಸ್ಯಾನಿಟರಿ ಮತ್ತು ಸ್ಪೆಷಲ್ ಕೇರ್ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು. ಇವುಗಳ ಸಂಗ್ರಹಣೆ, ಸಾಗಾಣಿಕೆ ಹಾಗೂ ಸಂಸ್ಕರಣೆ, ವಿಲೇವಾರಿಯನ್ನು ಸಾರ್ವಜನಿಕರಲ್ಲಿ ಅರಿವು ಮೂಡಿಸಿ. ಪ್ರತಿಯೊಂದು ಮನೆ ಹಂತದಿಂದ ತ್ಯಾಜ್ಯ ನಿರ್ವಹಣೆ ಆಗುವಂತೆ ಮಾಡಬೇಕು ಎಂದು ಸೂಚಿಸಿದರು.
ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮತ್ತು ಅವರ ನಡವಳಿಕೆಯಲ್ಲಿ ಬದಲಾವಣೆ ತರುವುದು ಮುಖ್ಯ ಎಂದು ತಿಳಿಸಿದ ಜಿಲ್ಲಾಧಿಕಾರಿ ಡಾ.ಕುಮಾರ, ಕುಡಿಯುವ ನೀರಿನ ಮೂಲಗಳನ್ನು (ಬೋರ್‌ವೆಲ್‌ಗಳು, ಓವರ್‌ಹೆಡ್ ಟ್ಯಾಂಕ್‌ಗಳು) ನಿಯಮಿತವಾಗಿ ಪರಿಶೀಲಿಸಬೇಕು. ಹಾಗೂ ಪೂರೈಕೆಯಾಗುವ ಕುಡಿಯುವ ನೀರಿನ ಮೂಲಗಳ ಗುಣಮಟ್ಟ ಪರೀಕ್ಷೆಯನ್ನು ನಡೆಸಬೇಕು ಎಂದು ತಿಳಿಸಿದರು.
ಆಸ್ತಿ ತೆರಿಗೆ ಬಾಕಿ ವಸೂಲಾತಿಗೆ ಸಂಬಂಧಿಸಿದಂತೆ ಇಲಾಖಾ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ತೆರಿಗೆ ವಸೂಲಾತಿಯನ್ನು ಚುರುಕುಗೊಳಿಸಲು ಅಗತ್ಯ ಕ್ರವಹಿಸುವಂತೆ ಸೂಚಿಸಿದ ಡಿಸಿ, ಇಂದಿರಾ ಕ್ಯಾಂಟೀನ್‌ಗಳಲ್ಲಿ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಹಾಗೂ ಸಾರ್ವಜನಿಕರಿಗೆ ಪೂರೈಸಲಾಗುವ ಉಪಹಾರ ಮತ್ತು ಊಟದ ಗುಣಮಟ್ಟದ ಜತೆಗೆ ಪ್ರಮಾಣವನ್ನು ಕಟ್ಟುನಿಟ್ಟಾಗಿ ಕಾಯ್ದುಕೊಳ್ಳಬೇಕು. ಪೌರಕಾರ್ಮಿಕರಿಗೆ ಆರೋಗ್ಯ ವಿಮೆ, ಸಕಾಲಕ್ಕೆ ವೇತನ ಪಾವತಿ ಹಾಗೂ ಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಬೇಕು. ಕಾರ್ಮಿಕರ ಸುರಕ್ಷತೆಗಾಗಿ ಸುರಕ್ಷತಾ ಪರಿಕರಗಳನ್ನು ನೀಡಲು ಅಗತ್ಯ ಕ್ರಮವಹಿಸಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಟಿ.ಎನ್.ನರಸಿಂಹಮೂರ್ತಿ, ಕಾರ್ಯಪಾಲಕ ಇಂಜಿನಿಯರ್ ಪ್ರತಾಪ್, ಪೌರಾಯುಕ್ತೆ ಪಂಪಾಶ್ರೀ ಹಾಗೂ ಪುರಸಭೆ ಮುಖ್ಯಾಧಿಕಾರಿಗಳು ಹಾಜರಿದ್ದರು.