ಚಿತ್ರ: ಮಳವಳ್ಳಿ ತಾಲೂಕಿನ ರಾವಣಿ ಸರ್ಕಾರಿ ಶಾಲೆಯಲ್ಲಿ ಬಿಸಿಊಟದಲ್ಲಿ ಹಲ್ಲಿ ಬಾಲದಂತಹ ವಸ್ತು ದೊರೆತ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪಟ್ಟಣದ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ತಪಾಸಣೆ ಮಾಡಲಾಯಿತು.
- ರಾವಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ
- ತಾಲೂಕು ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ
ಮಳವಳ್ಳಿ: ತಾಲೂಕಿನ ರಾವಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಧ್ಯಾಹ್ನ ಬಿಸಿಯೂಟದಲ್ಲಿ ಹಲ್ಲಿ ಬಾಲದಂತಹ ವಸ್ತು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತಂಕಗೊಂಡ ಶಿಕ್ಷಕರು ವಿದ್ಯಾರ್ಥಿಗಳನ್ನು ಪಟ್ಟಣದ ಸರ್ಕಾರಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ತಪಾಸಣೆ ನಡೆಸಿದರು.
ಶಾಲೆಯಲ್ಲಿ 67 ಮಕ್ಕಳ ದಾಖಲಾತಿ ಇದ್ದು, ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದ ವೇಳೆ ಹಲ್ಲಿ ಬಾಲದಂತಹ ವಸ್ತು ವಿದ್ಯಾರ್ಥಿಯೊಬ್ಬನಿಗೆ ದೊರೆತಿದೆ. ಅದನ್ನು ಶಿಕ್ಷಕರ ಗಮನಕ್ಕೆ ತಂದಾಗ ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮಾಹಿತಿ ನೀಡಿದ್ದರಿಂದ ಕೂಡಲೇ ಶಾಲೆಗೆ ಧಾವಿಸಿದ ಬಿಇಒ ಉಮಾ, ಊಟ ಸೇವಿಸಿದ್ದ ಎಲ್ಲ ಮಕ್ಕಳನ್ನು ಆಂಬುಲೆನ್ಸ್‌ಗಳಲ್ಲಿ ಮಳವಳ್ಳಿ ತಾಲೂಕು ಆಸ್ಪತ್ರೆಗೆ ಕರೆತಂದು ತಪಾಸಣೆ ಮಾಡಿಸಿದ್ದಾರೆ. ಯಾವುದೇ ಮಗುವಿನ ಆರೋಗ್ಯದಲ್ಲಿ ಏರುಪೇರು ಕಂಡುಬಂದಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಯ ವಾರ್ಡ್‌ಗಳಲ್ಲೇ ಇರಿಸಿಕೊಂಡು ನಿಗಾ ವಹಿಸಿದ್ದರು.
ವಿಷಯ ತಿಳಿಯುತ್ತಿದ್ದಂತೆ ಮಕ್ಕಳ ಪಾಲಕರು ಆತಂಕದಿಂದ ಆಸ್ಪತ್ರೆಗೆ ಬಂದಿದ್ದರಿಂದ ಕೆಲ ಸಮಯ ಬಿಗುವಿನ ವಾತಾವರಣವಾಗಿತ್ತು.
ಮಕ್ಕಳಲ್ಲಿ ಅಸ್ವಸ್ಥ ಲಕ್ಷಣ ಇಲ್ಲದಿದ್ದರೂ ಮುಂಜಾಗೃತಾ ಕ್ರಮವಾಗಿ ತಪಾಸಣೆಗೆ ಒಳಪಡಿಸಲಾಗಿದೆ. ಘಟನೆ ಕುರಿತು ಇಲಾಖೆ ಮಟ್ಟದಲ್ಲಿ ಸೂಕ್ಷ್ಮವಾಗಿ ಪರಿಶೀಲನೆ ನಡೆಸುವುದರ ಜತೆಗೆ, ತಪ್ಪು ಕಂಡುಬಂದರೆ ಶಿಸ್ತು ಕ್ರಮ ಕೈಕೊಳ್ಳಲಾಗುವುದು.
ಮಕ್ಕಳ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಆದರೂ ಆಸ್ಪತ್ರೆಯಲ್ಲೇ ಇರಿಸಿಕೊಂಡು ನಿಗಾ ವಹಿಸಲಾಗಿದೆ.
ಡಾ.ವೀರಭದ್ರಪ್ಪ ತಾಲೂಕು ಆರೋಗ್ಯಾಧಿಕಾರಿ