ಕಿಕ್ಕೇರಿಯಲ್ಲಿ ಸ್ಪಂದನಾ ಫೌಂಡೇಶನ್, ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ವತಿಯಿಂದ ಮಕ್ಕಳ ಮನದಲ್ಲಿ ಸಾಹಿತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಿಕ್ಕೇರಿ ಕೃಷ್ಣಮೂರ್ತಿ, ಅಭಿಷೇಕ್, ತ್ರಿವೇಣಿ, ನಾಗಮ್ಮ ಮತ್ತಿತರರಿದ್ದರು.
ಕಿಕ್ಕೇರಿ: ಎಳೆಯ ಮನಸುಗಳಿಗೆ ನಾಡಿಗಾಗಿ ದುಡಿದ ಮಹಾನೀಯರು, ಕವಿ, ಸಾಹಿತಿಗಳ ಪರಿಚಯ ಮಾಡಿಸುವುದು ಮುಖ್ಯವಾಗಿದೆ ಎಂದು ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ, ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಇಲ್ಲಿನ ಸ್ಪಂದನಾ ಫೌಂಡೇಶನ್, ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಕ್ಕಳ ಮನದಲ್ಲಿ ಸಾಹಿತ್ಯ ಕಾರ್ಯಕ್ರಮದಲ್ಲಿ ಮಾತನಾಡಿ, ಟಿವಿ, ಮೊಬೈಲ್ ಎಲ್ಲವನ್ನೂ ಕಸಿಯುತ್ತಿದೆ. ಮಕ್ಕಳು ಈ ಪ್ರಪಂಚದಿಂದ ಹೊರಬರಲಾರದೆ ಚಡಪಡಿಸುವಂತಾಗಿದೆ. ಪಾಲಕರು ಮೊಬೈಲ್‌ನಿಂದ ತಾವು ದೂರವಿದ್ದರೆ ಮಕ್ಕಳು ಕೂಡ ಮೊಬೈಲ್‌ನಿಂದ ದೂರವಾಗಲಿದ್ದಾರೆ. ಎಲ್ಲವನ್ನೂ ಕುತೂಹಲದಿಂದ ಕಲಿಯುವ ವಯಸ್ಸು ಮಕ್ಕಳಾಗಿದ್ದು, ಇಂತಹ ವೇಳೆಯಲ್ಲಿ ಬಲು ಜೋಪಾನ ವಹಿಸುವುದು ಪಾಲಕರ ಕರ್ತವ್ಯ ಎಂದರು.
ಪ್ರಕೃತಿಯನ್ನು ಮುನಿಯುವಂತೆ ಮಾಡಿ ಮರಗಿಡ ನಾಶ ಮಾಡಲಾಗಿದೆ. ಇನ್ನಾದರೂ ಎಚ್ಚೆತ್ತು ಸುತ್ತಮುತ್ತಲ ಪರಿಸರದಲ್ಲಿ ಗಿಡಮರ ಬೆಳೆಸಿ. ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ಆದರ್ಶವನ್ನು ಕಿಂಚಿತ್ತಾದರೂ ಪಾಲಿಸಿದರೆ ನಮ್ಮೆಲ್ಲರ ಉಸಿರು ಶುದ್ಧ ಗಾಳಿಯಿಂದ ಗಟ್ಟಿಯಾಗಲಿದೆ. ಈಗಾಗಲೇ ಕನ್ನಡ ಶಾಲೆ ಸಾಕಷ್ಟು ಮುಚ್ಚಿವೆ. ಇನ್ನಾದರೂ ಕನ್ನಡ ಶಾಲೆ ಉಳಿಸಲು ಮುಂದಾದರೆ ನಮ್ಮ ನಾಡಿನ ಭಾಷೆ ಉಳಿಯಲಿದೆ ಎಂದು ವಿನಂತಿಸಿದರು.
ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮದ್ ಭಾವೈಕ್ಯತೆಯೊಂದಿಗೆ ಬದುಕಿಗೆ ಸಾರವನ್ನು ತುಂಬಿದ ಅಪರೂಪದ ಕವಿ. ಎಲ್ಲರ ಮನದ ನೆನಪಿನಂಗಳದಲ್ಲಿ ಸದಾ ಉಳಿಯುವ ಜಿ.ಎಸ್.ಶಿವರುದ್ರಪ್ಪ ರಾಷ್ಟ್ರಕವಿಯಾಗಿ ಕನ್ನಡದ ಹಿರಿಮೆ ಗರಿಮೆಯನ್ನು ಸಾಗರದಷ್ಟು ವಿಸ್ತರಿಸಿದರು. ಇಂತಹವರ ಕಿರು ಪರಿಚಯ, ಗೀತೆ ಮಕ್ಕಳಿಗೆ ಮೊದಲು ಆಗಬೇಕಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟಿ ತ್ರಿವೇಣಿ, ನಾಗಮ್ಮ, ಅಭಿಷೇಕ್, ಕವಿತಾ ಮತ್ತಿತರರಿದ್ದರು.