ಪಾಂಡವಪುರ ಪಟ್ಟಣದ ಆದಿತ್ಯ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು.
ಪಾಂಡವಪುರ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಗುಣಮಟ್ಟದ ಶಿಕ್ಷಣ ಒದಗಿಸಬೇಕಾದ ಅಗತ್ಯ ಎದುರಾಗಿದೆ ಎಂದು ಆದಿತ್ಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹೇಮಂತ್ ಕುಮಾರ್ ಹೇಳಿದರು.
ಪಟ್ಟಣದ ಆದಿತ್ಯ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಕ್ಷರಾಭ್ಯಾಸ ಕಾರ್ಯಕ್ರಮಗಳು ಪೂರ್ವದಲ್ಲಿ ಗುರುಕುಲಗಳಲ್ಲಿ ನಡೆಯುತ್ತಿತ್ತು. ಇದೀಗ ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ ಮೂಡಲೆಂದು ನಮ್ಮ ಶಾಲೆಯಲ್ಲೂ ಕಾರ್ಯಕ್ರಮ ಆಯೋಜಿಸಿ, ಪಾಲಕರಿಂದ ಮಕ್ಕಳಿಗೆ ಅಕ್ಷರ ತಿದ್ದಿಸುವ ಮೂಲಕ ಅಕ್ಷರಾಭ್ಯಾಸ ನಡೆಸಲಾಗುತ್ತಿದೆ ಎಂದರು.
ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಸಂಸ್ಕಾರ, ಮಾನವೀಯ ಮೌಲ್ಯಯುಳ್ಳ ಗುಣಗಳು ಸಹ ಬಹಳ ಮುಖ್ಯವಾಗಿದೆ. ಪಾಲಕರು ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸುವ ಕೆಲಸ ಮಾಡಬೇಕು, ಶಾಲೆಯಲ್ಲಿ ಓದುವುದರ ಜತೆಗೆ ಮನೆಯಲ್ಲಿಯೂ ಮಕ್ಕಳಿಗೆ ಓದಿಸುವ ಜವಾಬ್ದಾರಿಯನ್ನು ಪಾಲಕರು ಹೊರಬೇಕಾಗಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಯಶೋದಮ್ಮ, ಖಜಾಂಚಿ ಶ್ರುತಿ, ಮುಖ್ಯಶಿಕ್ಷಕಿ ಶ್ವೇತಾ ಇತರರು ಇದ್ದರು.