ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ನಗರದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಡಾ.ಶಿವಕುಮಾರ ಬಿರಾದಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು. ವಿ.ಸಿ.ಉಮಾಶಂಕರ್, ಎಂ.ಸಿ.ಲಿಂಗರಾಜು, ತಿಪ್ಪೂರು ರಾಜೇಶ್, ವಿಶ್ವಾಸ್, ಕರಿಗೌಡ, ವರದರಾಜು ಇದ್ದರು.
ಮದ್ದೂರು: ತಾಲೂಕಿನಾದ್ಯಂತ ಸರ್ಕಾರಿ ಭೂಮಿ, ಗೋಮಾಳ ಮತ್ತು ಮುಜರಾಯಿ ಇಲಾಖೆಗಳ ಆಸ್ತಿಗಳು ಒತ್ತುವರಿಯಾಗಿದ್ದು, ತಾಲೂಕು ಆಡಳಿತ ಸರ್ವೇ ಮಾಡಿಸಿ ಸರ್ಕಾರದ ವಶಕ್ಕೆ ತೆಗೆದುಕೊಳ್ಳುವುದು ಸೇರಿ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಶುಕ್ರವಾರ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಡಾ.ಶಿವಕುಮಾರ ಬಿರಾದಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಮಾತನಾಡಿ, ಕೋಟ್ಯಂತರ ರೂ.ಬೆಲೆ ಬಾಳುವ ಸರ್ಕಾರಿ ಜಮೀನುಗಳು ಒತ್ತುವರಿಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಬೇಕೆಂದರು.
ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಸಮರ್ಪಕವಾಗಿ ಆಗುತ್ತಿಲ್ಲ. ಆವರಣದಲ್ಲಿ ಸುಸಜ್ಜಿತ ಶೌಚಾಗೃಹ, ವಾಹನ ನಿಲ್ದಾಣ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಮುಂದಾಗಬೇಕು ಹಾಗೂ ಹಣ ಪಡೆದು ಸರ್ಕಾರಿ ಕೆಲಸ ಮಾಡಿಸಿಕೊಡುವ ಮಧ್ಯವರ್ತಿಗಳ ಹಾವಳಿ ತಪ್ಪಿಸುವಂತೆ ಮನವಿ ಮಾಡಿದರು.
ತಾಲೂಕಿನ ಶಿಂಷಾ ನದಿ ಪಾತ್ರದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ತಡೆಗೆ ತಾಲೂಕು ಆಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳು ಪ್ರಾಮಾಣಿಕಕಾಗಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಉಪಸ್ಥಿತಿ ಇರದೆ ಬೇರೆ ಕಡೆಯಿಂದ ಕರ್ತವ್ಯಕ್ಕೆ ಬರುತ್ತಿದ್ದಾರೆ. ಇದರಿಂದ ಸರ್ವಾಜನಿಕರ ಹಾಗೂ ರೈತರ ಕೆಲಸಗಳು ವಿಳಂಬವಾಗುತ್ತಿವೆ. ಆದ್ದರಿಂದ ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿ ವಾಸಿಸುವಂತೆ ಆದೇಶಿಸುವಂತೆ ಮನವಿ ಮಾಡಿದರು.
ಡಾ.ಶಿವಕುಮಾರ ಬಿರಾದಾರ ಅವರು ಶುಕ್ರವಾರ ಹೊಸದಾಗಿ ತಹಸೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ವೇದಿಕೆ ವತಿಯಿಂದ ಅಭಿನಂದಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದಾರ, ಶುಕ್ರವಾರ ಹೊಸದಾಗಿ ಅಧಿಕಾರಿ ಸ್ವೀಕರಿಸಿದ್ದೇನೆ. ನಿಮ್ಮ ಎಲ್ಲ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಹಂತ ಹಂತವಾಗಿ ಬಗೆಹರಿಸುವಲ್ಲಿ ಪ್ರಯತ್ನಿಸಿ ಕಾರ್ಯರೂಪಕ್ಕೆ ತರುತ್ತೇನೆಂದು ಭರವಸೆ ನೀಡಿದರು
ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಲಿಂಗರಾಜು, ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ಯುವ ಘಟಕದ ಅಧ್ಯಕ್ಷ ವಿ.ಪಿ.ವಿಶ್ವಾಸ್, ಸಂಘಟನಾ ಕಾರ್ಯದರ್ಶಿಗಳಾದ ಅಜ್ಜಹಳ್ಳಿ ಕರಿಗೌಡ, ವಿ.ಪಿ.ವರದರಾಜು, ವಿ.ಬಿ.ಸದಾನಂದ, ಸಂಘಟನ ಕಾರ್ಯದರ್ಶಿ ಬೋರಾಪುರ ಸಿದ್ದರಾಮ, ಮುಖಂಡರಾದ ಕಲ್ಯಾಣಿ, ರಾಮಣ,್ಣ ವೀರಭದ್ರ ಚಾರಿ, ಜಿಲ್ಲಾ ರೈತ ಮುಖಂಡ ಕುದುರಗುಂಡಿ ನಾಗರಾಜು, ಚೇತನ್ ಸೇರಿದಂತೆ ಇತರರು ಹಾಜರಿದ್ದರು.