ಗೊರವನಹಳ್ಳಿ ಗ್ರಾಮವನ್ನು ನಗರಸಭೆಗೆ ಸೇರ್ಪಡೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಪೋಲೀಸರ ಲಘು ಲಾಠಿ ಪ್ರಹಾರದ ವೇಳೆ ಅಸ್ವಸ್ಥಗೊಂಡಿರುವ ಮಹಿಳೆ.
ಮದ್ದೂರು: ತಾಲೂಕಿನ ಗೊರವನಹಳ್ಳಿ ಗ್ರಾಮವನ್ನು ನಗರಸಭೆಗೆ ಸೇರ್ಪಡೆಗೊಳಿಸಿರುವುದನ್ನು ವಿರೋಧಿಸಿ 60 ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳದಲ್ಲಿ ಶನಿವಾರ ಪ್ರತಿಭಟನಾನಿರತರ ಮೇಲೆ ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆದಿದೆ.
ಧರಣಿ ಸ್ಥಳಕ್ಕೆ ಬಂದ ನಗರಸಭೆ ಹಾಗೂ ಗ್ರಾ.ಪಂ. ಅಧಿಕಾರಿಗಳು ಕಚೇರಿಯಲ್ಲಿದ್ದ ಕಡತಗಳನ್ನು ತೆಗೆದುಕೊಳ್ಳಲು ಮುಂದಾದ ವೇಳೆ ಪ್ರತಿಭಟನಾನಿರತರು ಮತ್ತು ಅಧಿಕಾರಿಗಳು, ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಪ್ರತಿಭಟನಾನಿರತರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಪರಿಣಾಮ ನಾಲ್ಕು ಜನ ಮಹಿಳೆಯರು ಅಸ್ವಸ್ಥಗೊಂಡಿದ್ದಾರೆ. ಜತೆಗೆ ನಾಲ್ಕು ಜನರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ಸ್ಥಳೀಯ ನಿವಾಸಿಗಳು ನಗರಸಭೆಗೆ ಸೇರ್ಪಡೆಗೊಳಿಸಿರುವುದನ್ನು ಖಂಡಿಸಿ ತಾಲೂಕಿನ ಗೊರವನಹಳ್ಳಿ ಗ್ರಾ.ಪಂ. ಕಚೇರಿ ಬಳಿ ಅಹೋರಾತ್ರಿ ಮತ್ತು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರು. ಎರಡನೇ ಶನಿವಾರವಾದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರೊಂದಿಗೆ ಆಗಮಿಸಿದ ನಗರಸಭೆ ಇಲಾಖೆ ಅಧಿಕಾರಿಗಳು ಗ್ರಾ.ಪಂ. ಕಚೇರಿಯಲ್ಲಿದ್ದ ಕಡತಗಳನ್ನು ವಶಕ್ಕೆ ಪಡೆಯುವ ವೇಳೆ ಧರಣಿನಿರತರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನಾನಿರತರು ಮತ್ತು ಪೋಲೀಸರು ಅಧಿಕಾರಿಗಳೊಟ್ಟಿಗೆ ಮಾತಿನ ಚಕಮಕಿ ನಡೆಸಿದರು.
ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಈ ವಿಷಯ ತಿಳಿದ ಸ್ಥಳೀಯ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಸ್ಥಳದಲ್ಲಿ ಜಮಾವಣೆಗೊಂಡು ಮದ್ದೂರು-ಮಳವಳ್ಳಿ ಮಾರ್ಗದ ರಸ್ತೆ ಸಂಚಾರ ತಡೆ ನಡೆಸಲು ಮುಂದಾದಾಗ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ವೇಳೆ ಪೊಲೀಸರು ರಸ್ತೆ ಸಂಚಾರ ತಡೆಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲೂ ಪ್ರತಿಭಟನಾನಿರತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ತಳ್ಳಾಟ ನೂಕಾಟ, ಉಂಟಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.
ಈ ವೇಳೆ ಪ್ರತಿಭಟನಾ ಸ್ಥಳದಲ್ಲಿದ್ದ ಸುನಂದಮ್ಮ, ಶೋಭಾ, ಗೌರಮ್ಮ ಹಾಗೂ ರಮೇಶ್ ಅಸ್ವಸ್ಥಗೊಂಡರು. ಅವರನ್ನು ತುರ್ತುಚಿಕಿತ್ಸೆ ನೀಡಿ ತಾಲೂಕು ಆಸ್ಪತ್ರೆಗೆ ರವಾನಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರತಿಭಟನಾನಿರತರಾದ ಪ್ರಸನ್ನ, ನಾಗಣ್ಣ, ಪುಟ್ಟಸ್ವಾಮಿ, ಮಹೇಶ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ಸ್ಥಳೀಯ ನಿವಾಸಿಗಳು, ಅಧಿಕಾರಿಗಳ ವಿರುದ್ಧ ಕಿಡಿಕಾರಿದರಲ್ಲದೆ ತಾವು ಯಾವುದೇ ಕಾರಣಕ್ಕೂ ನಗರಸಭೆಯನ್ನಾಗಿಸಲು ಕೈಬಿಡುವುದಿಲ್ಲವೆಂದು ಪಟ್ಟುಹಿಡಿದು ಪ್ರತಿಭಟನೆಗೆ ಮುಂದಾಗಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ.
ಪತ್ರಿಕೆಯೊಂದಿಗೆ ಮಾತನಾಡಿದ ಮುಖಂಡ ಗೊರವನಹಳ್ಳಿ ಪ್ರಸನ್ನ, ನಗರಸಭೆ ಸೇರ್ಪಡೆ ಸಂಬಂಧ ಪ್ರಕರಣವು ನ್ಯಾಯಾಲಯದಲ್ಲಿದ್ದು ತೀರ್ಪು ಬರುವವರೆಗೂ ತಮಗೆ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರೂ ಮತ್ತು ಅಲ್ಲಿಯವರೆಗೆ ಕಚೇರಿಯಲ್ಲಿದ್ದ ಕಡತಗಳನ್ನು ತೆಗೆದುಕೊಳ್ಳಬಾರದೆಂದು ಕೋರಿದ್ದರೂ ಮಾತಿಗೆ ಆಸ್ಪದ ನೀಡದ ಪೊಲೀಸರು ಮತ್ತು ಅಧಿಕಾರಿಗಳು ಪ್ರತಿಭಟನಾನಿರತರ ಮೇಲೆ ಲಾಠಿ ಪ್ರಹಾರ ನಡೆಸಿರುವುದು ಖಂಡನೀಯ ಎಂದು ಕಿಡಿಕಾರಿದರು.
ಸ್ಥಳೀಯ ಮುಖಂಡರಾದ ಅವಿನಾಶ್, ಸಂತೋಷ್, ಪ್ರಸನ್ನ, ಪುಟ್ಟಸ್ವಾಮಿ, ನಾಗಣ್ಣ, ಕುಮಾರ್, ಉಮೇಶ್, ಪ್ರಮೋದ್, ಪ್ರವೀಣ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.