ಮಂಡ್ಯದಲ್ಲಿ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಮಾತನಾಡಿದರು.
- ನಗರದ ಚಂದಗಾಲು ಬಡಾವಣೆಯಲ್ಲಿ ಅನುಷ್ಠಾನ ಸಮಾರಂಭ
- ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಜಿಲ್ಲಾ ಜಾಗೃತ ಸಮಿತಿ ಸಹಯೋಗದಲ್ಲಿ ಆಯೋಜನೆ
ಮಂಡ್ಯ: ಭಕ್ತಿಯೊಂದಿಗೆ ಜ್ಞಾನ ಗಳಿಕೆಗೂ ಆದ್ಯತೆ ನೀಡಬೇಕು. ಅದಕ್ಕೆ ದೇವರ ಮನೆ ಜತೆಗೆ ಮನೆಗೊಂದು ಗ್ರಂಥಾಲಯ ನಿರ್ಮಿಸಿಕೊಳ್ಳಬೇಕು. ಈ ಗ್ರಂಥಾಲಯ ದೊಡ್ಡವರು ಮತ್ತು ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. 12ನೆಯ ಶತಮಾನದಲ್ಲಿ ಬಸವಣ್ಣ ಲಿಂಗಧಾರಣೆ ಮತ್ತು ವಚನಗಳ ಮೂಲಕ ಭಕ್ತಿ ಮತ್ತು ಜ್ಞಾನವನ್ನು ಬೆಸೆದು ಜನರ ಬಾಳು ಬೆಳಗಿದವರು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಹೇಳಿದರು.
ನಗರದ ಚಂದಗಾಲು ಬಡಾವಣೆಯಲ್ಲಿ ಲೇಖಕ ಚಂದ್ರಶೇಖರ ದ.ಕೋ.ಹಳ್ಳಿ ಅವರ ನಿವಾಸದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಜಿಲ್ಲಾ ಜಾಗೃತ ಸಮಿತಿ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ನಮ್ಮ ಬಹುತೇಕ ಕಾಯಿಲೆಗಳಿಗೆ ಮಾನಸಿಕ ಅನಾರೋಗ್ಯವೇ ಕಾರಣ. ಮನಸ್ಥಿತಿ ಸರಿ ಇಲ್ಲ ಎಂದಾದರೆ ಪರಿಸ್ಥಿತಿ ಹದಗೆಡುತ್ತದೆ. ಅದಕ್ಕೆ ಮದ್ದು ಪುಸ್ತಕ ಓದುವುದು ಎಂದರು.
ಇತಿಹಾಸದ ಕೃತಿಗಳನ್ನು ಓದುವುದರಿಂದ ಭಾರತೀಯ ಸಂಸ್ಕೃತಿ ಪರಿಚಯಿಸಿಕೊಳ್ಳಬಹುದಾಗಿದೆ. ಪ್ರತಿಯೊಬ್ಬರೂ ಪ್ರತಿದಿನ 10 ನಿಮಿಷವಾದರೂ ಪುಸ್ತಕಗಳನ್ನು ಓದಬೇಕು. ಮನಸ್ಸಿನ ಒತ್ತಡವನ್ನು ತೊಡೆದುಹಾಕುವ ಶಕ್ತಿ ಪುಸ್ತಕಗಳಿಗಿವೆ. ಎಲ್ಲರೂ ಪುಸ್ತಕ ಓದುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದು ತಿಳಿಸಿದರು.
ಕವಿ ಕೊತ್ತತ್ತಿ ರಾಜು ಮಾತನಾಡಿ, ಪುಸ್ತಕ ಒಬ್ಬ ಗೆಳೆಯ, ಗುರು ಹಾಗೂ ಆತ್ಮಬಂಧುವಿನಂತೆ. ದೇವರ ಮನೆ ಎಷ್ಟು ಮುಖ್ಯವೋ ಹಾಗೆ ಮನದ ಮನೆಗೆ ಗ್ರಂಥಾಲಯ ಅಷ್ಟೇ ಮುಖ್ಯ. ಡಾ.ಬಿ.ಆರ್.ಅಂಬೇಡ್ಕರ್ ಅವರು ಅಂದಿನ ಕಾಲಕ್ಕೆ 50,000 ಪುಸ್ತಕಗಳ ಗ್ರಂಥಾಲಯ ಹೊಂದಿದ್ದರು. ಅವುಗಳೇ ನನ್ನ ನಿಜವಾದ ಆಸ್ತಿ ಎಂದಿದ್ದರು. ಜಾನ್ ರಸ್ಕಿನ್ ನ ಅಂಟು ದಿಸ್ ಲಾಸ್ಟ್ ಕೃತಿ ಮಹಾತ್ಮ ಗಾಂಧಿಯಲ್ಲಿ ಒಬ್ಬ ಹೋರಾಟಗಾರರನ್ನು ಹುಟ್ಟುಹಾಕಿತು. ಇದು ಪುಸ್ತಕದ ಶಕ್ತಿ ಮತ್ತು ಪ್ರೇರಣೆ ಎಂದು ತಿಳಿಸಿದರು.
ಕವಯತ್ರಿ ಎಚ್.ಆರ್.ಕನ್ನಿಕಾ ಮಾತನಾಡಿ, ಇಂತಹ ಕಾರ್ಯಕ್ರಮಗಳು ಮಕ್ಕಳ ಸಮ್ಮುಖದಲ್ಲಿ ನಡೆಯಬೇಕು. ಅವರಲ್ಲಿ ಜಾಗೃತಿ ಮೂಡಿಸಬೇಕು. ಮಕ್ಕಳು, ವಿದ್ಯಾರ್ಥಿಗಳು ಪುಸ್ತಕ ಪ್ರೀತಿ ಬೆಳೆಸಿಕೊಳ್ಳಬೇಕು. ಜ್ಞಾನಾರ್ಜನೆಗೆ ಮೊದಲ ಆದ್ಯತೆ ನೀಡಬೇಕು. ತಮ್ಮ ನವೋದಯ ತರಬೇತಿ ಕೇಂದ್ರದಲ್ಲಿ ಮಕ್ಕಳು ಮತ್ತು ಪಾಲಕರಿಗಾಗಿ ಮನೆಗೊಂದು ಗ್ರಂಥಾಲಯ ಮಹತ್ವ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಜಿಲ್ಲಾ ಜಾಗೃತ ಸಮಿತಿ ಸಂಚಾಲಕ ಕಾರಸವಾಡಿ ಮಹಾದೇವ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸದಸ್ಯೆ ಡಾ.ಎಂ.ಕೆಂಪಮ್ಮ, ಪ್ರಕಾಶಕರಾದ ಮಂಜು ಮುತ್ತೇಗೆರೆ, ಶಿವಕುಮಾರ ಆರಾಧ್ಯ, ಎಂ.ಮಂಚಶೆಟ್ಟಿ, ಉಮೇಶ ದಡಮಹಳ್ಳಿ, ಎಸ್.ದೇವರಾಜ್ ಪಂಡಿತ್, ಸದ್ದಾಂ ತಗ್ಗಹಳ್ಳಿ, ಕರ್ನಾಟಕ ಜಾನಪದ ಅಕಾಡೆಮಿ ಸಿಂಡಿಕೇಟ್ ಸದಸ್ಯ ಗೊರವಾಲೆ ಚಂದ್ರಶೇಖರ್, ಸಂಘಟಕ ಕೀಲಾರ ಕೃಷ್ಣೇಗೌಡ ಇತರರಿದ್ದರು.
ಇದೇ ಸಂದರ್ಭದಲ್ಲಿ ಚಂದ್ರಶೇಖರ ದ.ಕೋ.ಹಳ್ಳಿ ಮತ್ತು ವೈ.ಸಿ.ಪೂರ್ಣಿಮಾ ದಂಪತಿಯನ್ನು ಪ್ರಾಧಿಕಾರದ ವತಿಯಿಂದ ಅಭಿನಂದಿಸಲಾಯಿತು. ಅಂತೆಯೇ ಮನೆಗೊಂದು ಗ್ರಂಥಾಲಯ ಮಹಾ ಅಭಿಯಾನವನ್ನು ಆರಂಭಿಸಿರುವ ಡಾ.ಮಾನಸ ಅವರನ್ನು ಜಿಲ್ಲಾ ಜಾಗೃತ ಸಮಿತಿ ವತಿಯಿಂದ ಅಭಿನಂದಿಸಲಾಯಿತು.