ಮಂಡ್ಯ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಂಥಪಾಲಕರ ದಿನವನ್ನು ಆಚರಣೆ ಮಾಡಲಾಯಿತು.
- ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಂಥಪಾಲಕರ ದಿನಾಚರಣೆ
ಮಂಡ್ಯ: ಇತ್ತೀಚಿನ ದಿನಗಳಲ್ಲಿ ಪುಸ್ತಕಗಳನ್ನು ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಡಿಡಿಪಿಯು ಪ್ರಸನ್ನಕುಮಾರ್ ಆತಂಕ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಅವರ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಗ್ರಂಥಪಾಲಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಓದುಗರಿಗೆ ಅವರಿಗೆ ಬೇಕಾದ ಪುಸ್ತಕಗಳು ಸಿಗಬೇಕು. ವಿದ್ಯಾರ್ಥಿಗಳು ಪುಸ್ತಕಗಳನ್ನು ಓದಿ ಜ್ಞಾನದ ಮಟ್ಟವನ್ನು ಹೆಚ್ಚು ಮಾಡಿಕೊಳ್ಳಬೇಕು ಎಂದರು.
ಪ್ರತಿವರ್ಷ ಆ.12ರಂದು ಗ್ರಂಥ ಪಾಲಕರ ದಿನವನ್ನು ಆಚರಣೆ ಮಾಡಲಾಗಿದೆ. ಇಂದಿನ ಡಿಜಿಟಲ್ ಯುಗದಲ್ಲಿಯೂ ಗ್ರಂಥಾಲಯ ವಿಜ್ಞಾನದ ಪಿತಾಮಹ ರಂಗನಾಥನ್ ಅವರನ್ನು ನಾವು ಸ್ಮರಿಸಲೇಬೇಕು. ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಗ್ರಂಥಾಲಯ ಮತ್ತು ಅಂತರ್ಜಾಲದ ಮೂಲಕ ಜ್ಞಾನವನ್ನು ಗಳಿಸಿಕೊಳ್ಳುತ್ತಿದ್ದೇವೆ ಎಂದರೆ ಅದು ಗ್ರಂಥಾಲಯದ ಸೇವೆಯಿಂದ ಎನ್ನುವುದನ್ನು ಮರೆಯಬಾರದು. ಮನುಷ್ಯನ ಸರ್ವತೋಮುಖ ಬೆಳವಣಿಗೆ ಆಗಬೇಕು ಎಂದರೆ ಪುಸ್ತಕಗಳಿಂದ ಮಾತ್ರ ಸಾಧ್ಯ. ಪುಸ್ತಕದ ಮೌಲ್ಯ ಮತ್ತು ಸಾರ್ಥಕ್ಯ ಪಡೆಯಬೇಕಾದರೆ ಗ್ರಂಥಾಲಯಗಳು ಅವಶ್ಯ ಹಾಗೂ ಗ್ರಂಥಪಾಲಕನ ಪಾತ್ರ ಅತೀ ಮಹತ್ವದ್ದಾಗಿದೆ ಎಂದು ಹೇಳಿದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಮಾತನಾಡಿ, ಮೊಬೈಲ್, ಕಂಪ್ಯೂಟರ್ ಹೊರತಾದ ಪ್ರಪಂಚವನ್ನು ವಿದ್ಯಾರ್ಥಿಗಳು ಪುಸ್ತಕವನ್ನು ಓದುವ ಮೂಲಕ ಗ್ರಂಥಾಲಯ ಬಳಸಿಕೊಳ್ಳಿ. ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದಿದಾಗ ಜ್ಞಾನವಂತರಾಗುತ್ತೀರಿ ಎಂದು ಹೇಳಿದರು.
ಪ್ರಾಂಶುಪಾಲ ತಮ್ಮೇಗೌಡ, ಉಪನ್ಯಾಸಕರಾದ ಚಂದ್ರಲಿಂಗು, ಪೂರ್ಣಿಮಾ, ದುದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ವೀಣಾ, ಗ್ರಂಥಪಾಲಕಿ ಬಿ.ಆರ್.ನಿರ್ಮಲಾ ಇತರರಿದ್ದರು.