ದರ್ಶನ್ ಪುಟ್ಟಣ್ಣಯ್ಯ, ಶಾಸಕ, ಮೇಲುಕೋಟೆ ವಿಧಾನಸಭಾ ಕ್ಷೇತ್ರ.
ಪಾಂಡವಪುರ : ಸಾಲದ ಪ್ರಮಾಣ ನಿಯಂತ್ರಿಸಲು ಸಾಲ ಸ್ಥಿರೀಕರಣ ನಿಧಿ ಸ್ಥಾಪನೆ, ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ನಡುವಿನ ತಲಾ ಆದಾಯ ಸಮತೋಲನಕ್ಕೆ ಕ್ರಮ, ರೈತರ ಅನುಕೂಲಕ್ಕಾಗಿ ಕೋಲ್ಡ್ ಚೈನ್ ಇನ್ವೆಸ್ಟ್‌ಮೆಂಟ್ ಅನುದಾನ ಬಿಡುಗಡೆ ಹಾಗೂ ಸರ್ಕಾರದಿಂದ ಸಂಬಳ ಪಡೆಯುವ ಅನುದಾನಿತ ಶಾಲಾ, ಕಾಲೇಜುಗಳ ಶಿಕ್ಷಕರಿಗೆ ಜವಾಬ್ದಾರಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಬುಧವಾರ ತಮ್ಮ ಸುಧೀರ್ಘ ಭಾಷಣದಲ್ಲಿ ಸರ್ಕಾರದ ಗಮನ ಸೆಳೆದರು.
2026-27 ಸಾಲಿನ ಬಜೆಟ್ ಅಧಿವೇಶನದಲ್ಲಿ ಅವರು ಮಾತನಾಡಿ, ಪ್ರಸ್ತುತ ಸಾಲಿನಲ್ಲಿ ಅನುದಾನಿತ ಶಾಲೆಗಳ ಶಿಕ್ಷಕರ ಸಂಬಳಕ್ಕೆ 19 ಸಾವಿರ ಕೋಟಿ ರೂ. ನಿಗದಿ ಮಾಡಲಾಗಿದೆ. ಇದು ಸಂತಸದ ವಿಷಯ. ಆದರೆ ಅನುದಾನಿತ ಶಾಲಾ ಶಿಕ್ಷಕರಿಗೆ ಯಾವುದೇ ನಿಬಂಧನೆಗಳನ್ನು ರೂಪಿಸಿಲ್ಲ. ಕೆಲಸ ನಿರ್ವಹಿಸುತ್ತಿದ್ದಾರೆ ಎಂದರೆ ಅವರಿಗೆ ಸರ್ಕಾರ ವೇತನ ಪಾವತಿಸುತ್ತಿದೆ. ಅವರು ಸಾಮಾಜಿಕ ಕಳಕಳಿಯ ಜವಾಬ್ದಾರಿ ನಿಭಾಯಿಸದೆ ಸಂಬಳ ಪಡೆಯುತ್ತಿದ್ದಾರೆ. ಮಕ್ಕಳ ದಾಖಲಾತಿ ಹೆಚ್ಚಿಸುವುದು, ಶಾಲೆಗಳ ಅಭಿವೃದ್ಧಿ ಇತ್ಯಾದಿ ವಿಚಾರಗಳಿಗೆ ಅವರು ಕೊಡುಗೆ ಶೂನ್ಯ. ಸರ್ಕಾರ ಜವಾಬ್ದಾರಿ ನೀಡಿದರೆ ಅನುದಾನಿತ ಮತ್ತು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚುತ್ತದೆ ಎಂದು ಪ್ರತಿಪಾದಿಸಿದರು.
ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಯಾವ ವಿಭಾಗದಲ್ಲಿ ಪದವಿಧರರಾಗುತ್ತಿದ್ದಾರೆ. ಅದಕ್ಕೆ ಬೇಡಿಕೆ ಇದೆಯೇ? ಎಂಬುದನ್ನು ಸರ್ಕಾರ ಪರಿಗಣಿಸುತ್ತಿಲ್ಲ. ಈ ವಿಚಾರಗಳನ್ನು ಆಧರಿಸಿ ಅನುದಾನ ನೀಡುತ್ತಿಲ್ಲ. ವ್ಯವಸ್ಥೆಯಲ್ಲಿ ಬೇಡಿಕೆ ಇರುವ ಶಿಕ್ಷಣವನ್ನು ನಾವು ಬೋಧಿಸುತ್ತಿಲ್ಲ. ಇದರಿಂದ ನಿರುದ್ಯೋಗ ಹೆಚ್ಚುತ್ತಿದೆ. ದತ್ತಾಂಶದ ಪ್ರಕಾರ ಇಂಜಿನಿಯರಿಂಗ್ ಪದವಿಧರರಿಗಿಂತ ಐಟಿಐ ಮಾಡಿರುವ ವಿದ್ಯಾರ್ಥಿಗಳಿಗೆ ಹೆಚ್ಚು ಕೆಲಸ ಸಿಗುತ್ತಿದೆ. ಶೇ.50ರಷ್ಟು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕೆಲಸ ಸಿಗುತ್ತಿಲ್ಲ ಎಂಬ ವಿಚಾರಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿದರು.
ಆರೋಗ್ಯ ಇಲಾಖೆಗೆ ಸಿಬ್ಬಂದಿ ನೇಮಿಸಿ : ಸರ್ಕಾರ ಆಸ್ಪತ್ರೆಗಳನ್ನು ತೆರೆಯಲು ಅನುದಾನ ನೀಡುತ್ತಿದೆ, ಆಸ್ಪತ್ರೆ ಕಟ್ಟುತ್ತಿದೆ ಎಂಬುದು ಹೆಚ್ಚುಗಾರಿಕೆಯಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿ ನೇಮಕ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ವೈದ್ಯರು, ದಾದಿಯರು, ಡಿ ಗ್ರೂಪ್ ನೌಕರರು ಸೇರಿದಂತೆ ಸುಮಾರು 38 ಸಾವಿರ ಹುದ್ದೆಗಳು ಖಾಲಿ ಇದೆ ಎಂಬ ಮಾಹಿತಿ ಇದೆ. ಆಸ್ಪತ್ರೆ ಕಟ್ಟುವುದು ಎಷ್ಟು ಮುಖ್ಯವೋ ಸಿಬ್ಬಂದಿ ನೇಮಕ ಅದಕ್ಕಿಂತಲೂ ಮುಖ್ಯ. ಮುಂದಿನ ಒಂದು ವರ್ಷದಲ್ಲಿ ಖಾಲಿ ಹುದ್ದೆಗಳ ಪೈಕಿ ಶೇ.80 ರಷ್ಟನ್ನಾದರೂ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಆರ್ಥಿಕ ಅಸಮತೋಲನ ನಿವಾರಿಸಿ : ರಾಜ್ಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚುತ್ತಿರುವ ನಡುವೆ ಬೆಂಗಳೂರು ಮತ್ತು ಉತ್ತರ ಕರ್ನಾಟಕ ಜನರ ನಡುವಿನ ತಲಾದಾಯದಲ್ಲಿ ಅಮತೋಲನವಿದೆ. ಬೆಂಗಳೂರಿಗರು 8 ಲಕ್ಷ ತಲಾದಾಯ ಹೊಂದಿದ್ದರೆ ಉತ್ತರ ಕರ್ನಾಟಕದ ಜನ 1.5 ಲಕ್ಷ ರೂ. ತಲಾದಾಯ ಹೊಂದಿದ್ದಾರೆ. ಈ ಅಸಮತೋಲವನ್ನು ಹೋಗಲಾಡಿಸಲು ಎರಡನೇ ಹಂತದ ನಗರಗಳನ್ನು ಸಜ್ಜುಗೊಳಿಸಬೇಕು. ಜತೆಗೆ ಸ್ಟಾರ್ಟ್ ಅಪ್ ಪಾಲಿಸಿಗೆ ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಅನುದಾನ ನೀಡಲಾಗಿದೆ. ಇದು ಹೆಚ್ಚಳವಾಗಬೇಕು. ಗ್ರಾಮೀಣ ಪ್ರದೇಶಗಳಿಗೂ ಕೂಡ ಈ ಪಾಲಿಸಿಗಳನ್ನು ಪರಿಚಯಸಬೇಕು. ದ್ವಿತೀಯ ಮತ್ತು ತೃತೀಯ ನಗರಗಳು ನಿರ್ಮಾಣವಾದರೆ ಸ್ಥಳೀಯವಾಗಿ ಉದ್ಯಮಿಗಳು ಸೃಷ್ಠಿಯಾಗುತ್ತಾರೆ ಎಂದು ಹೇಳಿದರು.
ಸಾಲ ಸ್ಥಿರೀಕರಣ ನಿಧಿ ಸ್ಥಾಪಿಸಿ : ಪ್ರತಿ ವರ್ಷ ಬಡ್ಡಿ ಪಾವತಿ ಏರಿಕೆಯಾಗುತ್ತಿದೆ. ಆದಾಯದ ಶೇ.16.9 ಮೊತ್ತವನ್ನು ರಾಜ್ಯ ಸರ್ಕಾರ ಬಡ್ಡಿ ರೂಪದಲ್ಲಿ ಪಾವತಿಸುತ್ತಿದೆ. ಇದು ಹೀಗೆ ಮುಂದುವರೆದರೆ 2030ರ ವೇಳೆಗೆ ವಾರ್ಷಿಕವಾಗಿ 79 ಸಾವಿರ ಕೋಟಿ ರೂ. ಬಡ್ಡಿ ಪಾವತಿಸಬೇಕಾಗುತ್ತದೆ. ಇದಕ್ಕಾಗಿ ಸರ್ಕಾರ ಕರ್ನಾಟಕ ಸಾಲ ಸ್ಥಿರೀಕರಣ ನಿಧಿ ಸ್ಥಾಪಿಸಿ ಶೇ.0.25 ಜಿಡಿಎಸ್‌ಪಿ ಮೊತ್ತವನ್ನು ನೇರವಾಗಿ ಫಂಡ್‌ನಲ್ಲಿ ಹೂಡಿಕೆ ಮಾಡಬೇಕು. ಜತೆಗೆ ಕೇಂದ್ರ ಸರ್ಕಾರದ ಶೇ.8.5 ರಷ್ಟಿರುವ ಸಾಲವನ್ನು ಅದಷ್ಟು ಬೇಗ ತೀರಿಸಿದರೆ ಅನುಕೂಲವಾಗುತ್ತದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.