ಮದ್ದೂರು ತಾಲೂಕಿನ ಹೆಬ್ಬೆರಳು ಗ್ರಾಮದ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಮೇಲಂತಸ್ತಿನ ಕಟ್ಟಡಕ್ಕೆ ಬಿಡುಗಡೆಯಾಗಿರುವ ಐದು ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಂ.ಉದಯ ಭೂಮಿ ಪೂಜೆ ನೆರವೇರಿಸಿದರು. ಪಿ.ಸಂದರ್ಶ, ಎಂ.ಪಿ.ಕೃಷ್ಣೇಗೌಡ, ಮಹೇಶ್, ಶಂಕರಲಿಂಗಯ್ಯ, ಬೋರೇಗೌಡ, ಲಿಂಗರಾಜು ಇದ್ದರು. 
ಮಂಡ್ಯ

ಸಹಕಾರ ಸಂಘಗಳ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲಿ

ಪ್ರಮುಖ ಮುಖ್ಯಾಂಶಗಳು

  • ರೈತರಿಗೆ ಶಾಸಕ ಕೆ.ಎಂ.ಉದಯ್ ಸಲಹೆ
  • ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
ಮದ್ದೂರು: ರೈತರ ಆರ್ಥಿಕಾಭಿವೃದ್ಧಿಗೆ ಸಹಕಾರ ಸಂಘಗಳು ಪೂರಕವಾಗಿದ್ದು, ಸಿಗುವ ಹಲವು ಸವಲತ್ತುಗಳನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವುದರ ಮೂಲಕ ಸ್ವಾವಲಂಬಿ ಬದುಕನ್ನು ಕಂಡುಕೊಳ್ಳಬೇಕೆಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಆತಗೂರು ಹೋಬಳಿ ವ್ಯಾಪ್ತಿಯ ಹೆಬ್ಬೆರಳು ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಮೇಲಂತಸ್ತಿನ ಕಟ್ಟಡಕ್ಕೆ ಬಿಡುಗಡೆಯಾಗಿರುವ 5 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ರೈತರು ಸಹಕಾರ ಸಂಘಗಳಲ್ಲಿ ಸಿಗುವ ಹತ್ತು ಹಲವು ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕಾಭಿವೃದ್ಧಿ ಹೊಂದುವ ಜತೆಗೆ ತಮ್ಮ ಬದುಕನ್ನು ಹಸನಗೊಳಿಸಿಕೊಳ್ಳಲು ಮುಂದಾಗಬೇಕೆಂದು ಕಿವಿಮಾತು ಹೇಳಿದರಲ್ಲದೆ ಇತ್ತೀಚಿನ ದಿನಗಳಲ್ಲಿ ಸಾಲ ಪಡೆಯುವ ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿ ಮಾಡದ ಕಾರಣ ಸಂಘಗಳು ಆರ್ಥಿಕವಾಗಿ ಹಿನ್ನಡೆ ಅನುಭವಿಸಲು ಕಾರಣವಾಗಿವೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ ಮಾತನಾಡಿ, ತಾಲೂಕಿನಾದ್ಯಂತ ಹಲವು ಸಂಘ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುವುದರ ಜತೆಗೆ ಸಾಲ ಸೌಲಭ್ಯವನ್ನು ಒದಗಿಸಿ ಸ್ತ್ರೀಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಿಸುವ ಜತೆಗೆ ಬೆಳೆಸಾಲ, ರೇಷ್ಮೆಹುಳು ಸಾಕಣೆ ಮನೆ ನಿರ್ಮಾಣಕ್ಕೂ ಅಗತ್ಯ ಸೌಲಭ್ಯ ನೀಡುತ್ತಿರುವುದಾಗಿ ಹೇಳಿದರು.
ಸಹಕಾರ ಸಂಘದಲ್ಲಿ 1800ಕ್ಕೂ ಅಧಿಕ ಷೇರುದಾರರಿದ್ದು, ಪ್ರತಿವರ್ಷ ಸುಮಾರು 4 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸುವ ಜತೆಗೆ ಮೂರು ಕೋಟಿ ರೂ.ಗೂ ಅಧಿಕ ಸಾಲ ವಿತರಿಸಲಾಗಿದೆ. ಸಂಘವನ್ನು ಆರ್ಥಿಕ ಪ್ರಗತಿಯತ್ತ ಕೊಂಡೊಯ್ಯಲು ನಿರ್ದೇಶಕರು ಹಾಗೂ ಷೇರುದಾರರು ನಿರಂತರವಾಗಿ ಶ್ರಮಿಸಬೇಕು ಎಂದರು.
ಮುಂದಿನ ದಿನಗಳಲ್ಲಿ ಸಹಕಾರ ಸಂಘವು ನಿರೀಕ್ಷೆಗೂ ಮೀರಿ ಉತ್ತಮವಾಗಿ ಕಾರ್ಯ ನಿರ್ವಹಿಸಲೆಂದು ಶಾಸಕರ ಅನುದಾನದಲ್ಲಿ ಬಿಡುಗಡೆಯಾಗಿರುವ 5 ಲಕ್ಷ ರೂ. ಅನುದಾನದಲ್ಲಿ ಮೇಲಂತಸ್ತಿನ ಕಟ್ಟಡದಲ್ಲಿ ಹೈಟೆಕ್ ಸಭಾಂಗಣ, ಶೌಚಗೃಹ ನಿರ್ಮಿಸುವುದರ ಮೂಲಕ ಸಂಘದ ಶ್ರೇಯೋಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.
ಸಹಕಾರ ಸಂಘದ ಅಧ್ಯಕ್ಷ ಎಂ.ಪಿ.ಕೃಷ್ಣೇಗೌಡ, ಉಪಾಧ್ಯಕ್ಷ ಮಹೇಶ್, ನಿರ್ದೇಶಕರಾದ ಶಂಕರಲಿಂಗಯ್ಯ, ಬಿ.ಎಸ್.ಬೋರೇಗೌಡ, ಎಚ್.ಎಸ್.ಲಿಂಗರಾಜು, ಚನ್ನಕೇಶವ, ಕೃಷ್ಣ, ಜಯಲಕ್ಷ್ಮಮ್ಮ, ಮಂಚಮ್ಮ, ವೆಂಕಟೇಶ್ ಇತರರಿದ್ದರು.