ಮಹಾತ್ಮ ಗಾಂಧೀಜಿ ಭೇಟಿ ನೀಡಿ ಭಾಷಣ ಮಾಡಿದ್ದ ಶ್ರೀರಂಗಪಟ್ಟಣದ ಬಿ.ಆರ್.ಅಂಬೇಡ್ಕರ್ ವೃತ್ತ ಸಮೀಪದ ಪುರಾತನ ಕಟ್ಟಡದ ಬಳಿ ಹಮ್ಮಿಕೊಂಡಿದ್ದ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರ ಹಿಡಿದು ಶ್ರದ್ಧ್ದಾಂಜಲಿ ಸಲ್ಲಿಸಲಾಯಿತು.
- ಗಾಂಧಿವಾದಿ ಬಿ.ಸುಜಯ್‌ಕುಮಾರ್ ಅಭಿಪ್ರಾಯ
ಶ್ರೀರಂಗಪಟ್ಟಣ : ಶಸ್ತ್ರಗಳಿಂದ ಸಾಧ್ಯವಾಗದ ಸ್ವಾತಂತ್ರ್ಯ ಹೋರಾಟವನ್ನು ಶಾಂತಿ ಮತ್ತು ಅಹಿಂಸೆಯಿಂದ ಸಾಧಿಸಿ ಗಳಿಸಿದ ಮಹಾತ್ಮ ಗಾಂಧೀಜಿ ಹತ್ಯೆಯಾದ 1948ರ ಜ.30 ಆ ದಿನ ಭಾರತಕ್ಕೆ ಕರಾಳ ದಿನ ಎಂದು ಗಾಂಧಿವಾದಿ ಬಿ.ಸುಜಯ್ ಕುಮಾರ್ ಹೇಳಿದರು.
ಪಟ್ಟಣದ ಬಿ.ಆರ್.ಅಂಬೇಡ್ಕರ್ ವೃತ್ತ ಸಮೀಪದಲ್ಲಿರುವ ಮಹಾತ್ಮ ಗಾಂಧೀಜಿ ಭೇಟಿ ನೀಡಿ ಭಾಷಣ ಮಾಡಿದ್ದ ಪುರಾತನ ಕಟ್ಟಡದ ಬಳಿ ಶುಕ್ರವಾರ ಪ್ರಜ್ಞಾವಂತರ ವೇದಿಕೆ, ಮುಸ್ಲಿಂ ಸೌಹಾರ್ದ ವೇದಿಕೆ ಹಾಗೂ ರೈತ ಸಂಘ, ಕಸಾಪ, ಕರವೇ ಸೇರಿದಂತೆ ಇತರ ಸಂಘಟನೆಗಳ ಕಾರ್ಯಕರ್ತರೊಂದಿಗೆ ಶುಕ್ರವಾರ ಸಂಜೆ ಹುತಾತ್ಮ ದಿನಾಚರಣೆ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿ ಭಾವಚಿತ್ರ ಹಿಡಿದು ಶ್ರದ್ಧಾಂಜಲಿ ಸಲ್ಲಿಸಿ ಬಳಿಕ ಅವರು ಮಾತನಾಡಿದರು.
1927ರ ಜುಲೈ 22ರಂದು ಕೆ.ಆರ್.ನಗರದಿಂದ ಕೆ.ಆರ್.ಸಾಗರದ ಹಾದಿಯಾಗಿ ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ದ ಗಾಂಧೀಜಿ ಭಾರತದ ಸ್ವಾತಂತ್ರ್ಯಕ್ಕಾಗಿ ಭಾರತೀಯರನ್ನು ಶಾಂತಿ, ಅಹಿಂಸೆ ಹಾಗೂ ಸತ್ಯಹಾದಿಯ ಹೋರಾಟದ ಮೂಲಕ ಸಂಘಟಿಸಿದ್ದರು. ಅಂತಹ ಮಹಾತ್ಮರು ಬಿರ್ಲಾ ಹೌಸ್‌ನಲ್ಲಿ ಪ್ರಾರ್ಥನೆ ಸಲ್ಲಿಸಿ ಹಿಂದಿರುವಾಗ ಇಳಿಸಂಜೆಯಲ್ಲಿ ಹತ್ಯೆ ಮಾಡಲಾಯಿತು. ಗಾಂಧಿ ಹಾಕಿಕೊಟ್ಟ ನೀತಿ, ಆದರ್ಶ ಮೌಲ್ಯಗಳು ಈಗ ನಮ್ಮವರಿಂದ, ಕುಸಿಯುತ್ತಿರುವುದು ವಿಷಾದನೀಯ ಎಂದರು.
ಇದಕ್ಕೂ ಮೊದಲು ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಜಮಾವಣೆಗೊಂಡ ಪ್ರಜ್ಞಾವಂತರ ವೇದಿಕೆ ಸಂಚಾಲಕ ಹಾಗೂ ವಕೀಲ ಸಿ.ಎಸ್.ವೆಂಕಟೇಶ್ ನೇತೃತ್ವದಲ್ಲಿ ಗಾಂಧೀಜಿ ಭಾಷಣ ಮಾಡಿದ್ದ ಸ್ಥಳದವರೆಗೆ ಪಟ್ಟಣದ ಮುಖ್ಯರಸ್ತೆಯ ಮೂಲಕ ಮೌನ ಮೆರವಣಿಗೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಐಕ್ಯ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಲಯನ್ ಎನ್.ಸರಸ್ವತಿ, ರಂಗನಾಯಕಿ ಸ್ತ್ರೀಸಮಾಜದ ಸದಸ್ಯೆ ಗಾಯತ್ರಿ, ಗಂಜಾಂನ ಅಬ್ಬೆದುಬ್ಬಾ ಚರ್ಚ್ ಫಾದರ್ ಸಗಾಯ್ ಪುಷ್ಪರಾಜ್, ಮುಸ್ಲಿಂ ಸೌಹಾರ್ದ ವೇದಿಕೆಯ ಅಧ್ಯಕ್ಷ ಅಫ್ಸರ್ ಖಾನ್, ಭಾರತೀಯ ಬೌದ್ಧ ಮಹಾಸಭಾ ತಾಲೂಕು ಮಾಜಿ ಅಧ್ಯಕ್ಷ ಕೆ.ಟಿ.ರಂಗಯ್ಯ, ನಿವೃತ್ತ ಪ್ರಾಂಶುಪಾಲ ಇಲಿಯಾಸ್ ಅಹಮದ್, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಜಯಶಂಕರ್, ಕವಿದಾಸ್ ಪ್ರಕಾಶ್, ಹೋರಾಟಗಾರ ಚಿಕ್ಕತಮ್ಮೇಗೌಡ, ಅಬ್ದುಲ್ ಸುಕೂರ್ ಉಪಸ್ಥಿತರಿದ್ದರು.