ಶಿವರಾತ್ರೀಶ್ವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಬಿ.ಎಸ್.ಪಾಟೀಲ್ ಉದ್ಘಾಟಿಸಿದರು. ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಪಿ.ಎಂ.ನರೇಂದ್ರಸ್ವಾಮಿ, ಡಾ.ಕೆ.ಅನ್ನದಾನಿ ಇತರರಿದ್ದರು. 
ಮಂಡ್ಯ

ಸಂವಿಧಾನದಬದ್ಧ ಹಕ್ಕು ಪಡೆಯಲು ಜನ ಜಾಗೃತರಾಗಲಿ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066 ನೇ ಜಯಂತ್ಯುತ್ಸವ
ಮಳವಳ್ಳಿ: 12ನೇ ಶತಮಾನದಲ್ಲಿ ಬಸವಣ್ಣನ ಸಮಗ್ರ ಕ್ರಾಂತಿಯಿಂದ ಬದಲಾಗಬೇಕಿದ್ದ ಪ್ರಸ್ತುತ ಸಮಾಜದಲ್ಲಿನ ಜನರಲ್ಲಿ ಭೇದಭಾವ ಇಂದಿಗೂ ತಾಂಡವವಾಡುತ್ತಿರುವುದು ಬೇಸರದ ಸಂಗತಿ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ತಿಳಿಸಿದರು.
ಸುತ್ತೂರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066 ನೇ ಜಯಂತ್ಯುತ್ಸವದಲ್ಲಿ ಶುಕ್ರವಾರ ಮಾತನಾಡಿ, ಸಮಾಜದಲ್ಲಿ ಹಕ್ಕುಗಳನ್ನು ಸಮಾಜಕ್ಕೆ ಕೊಡಬೇಕಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಿತ್ತುಕೊಳ್ಳುವ ಪ್ರವೃತ್ತಿ ಹೊಂದಿದ್ದಾರೆ. ಇದಕ್ಕೆ ಕಾರಣ ಪ್ರಜೆಗಳು. ಆಯ್ಕೆ ಮಾಡುವ ವ್ಯಕ್ತಿಗಳಿಂದ ಸಿಗಬೇಕಾದ ಸಂವಿಧಾನಬದ್ಧ ಹಕ್ಕುಗಳನ್ನು ಪಡೆದುಕೊಳ್ಳಲು ಜನರಲ್ಲಿ ಜಾಗೃತಿ ಮೂಡಬೇಕು ಎಂದರು.
ಸಂಸದ ಡಾ.ಸಿ.ಎನ್. ಮಂಜುನಾಥ್ ಮಾತನಾಡಿ, ಮನುಷ್ಯರಾಗಿ ಹುಟ್ಟಿದ ಮೇಲೆ ಸಂಸ್ಕಾರಯುತ ಜೀವನ ನಡೆಸುವ ಮೂಲಕ ಮಹದೇವನಾಗಬೇಕು. ಪ್ರಸ್ತುತ ಕಾಲಘಟ್ಟದಲ್ಲಿ ಹಣ ಉಳ್ಳವರಿಗೆ ಗೌರವ ಸಿಗುವಂತಾಗಿದೆ. ಹಿಂದೆ ಗುಡಿಯಲ್ಲಿರುವ ದೇವರು ಕಲ್ಲಾಗಿತ್ತು. ಜನರ ಮನಸ್ಸು ಬಂಗಾರದಂತ್ತಿತ್ತು. ಆದರೆ ಇಂದು ಜನರ ಮನಸ್ಸು ಕಲ್ಲಾಗಿದೆ. ಗುಡಿಯಲ್ಲಿನ ದೇವರು ಬಂಗಾರವಾಗಿರುವುದು ವಿಪರ್ಯಾಸ ಎಂದರು.
ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಸಚಿವ ಬಿ.ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕನಕಪುರ ಮರಳೆಗವಿ ಮಠದ ಶ್ರೀ ಮುಮ್ಮಡಿ ಶಿವರುದ್ರಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವೆ ರಾಣಿ ಸತೀಶ್, ಶಾಸಕ ಪಿ.ಎಂ. ನರೇಂದ್ರಸ್ವಾಮಿ, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಮಾಜಿ ಶಾಸಕಿ ಮಲ್ಲಾಜಮ್ಮ, ಸಮಾಜ ಸೇವಕರಾದ ಎಸ್.ಸಚ್ಚಿದಾನಂದ, ಎನ್.ಎಸ್. ಇಂದ್ರೇಶ್, ಪೊಲೀಸ್ ಉಪ ಮಹಾ ನಿರೀಕ್ಷಕ ಎಂ.ಬಿ.ಬೋರಲಿಂಗಯ್ಯ, ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್, ಚಿತ್ರನಟರಾದ ನಿನಾಸಂ ಸತೀಶ್, ನಾಗಭೂಷಣ್ ಉಪಸ್ಥಿತರಿದ್ದರು.