ಮದ್ದೂರು ತಾಲೂಕಿನ ಸೋಮನಹಳ್ಳಿ ಬಳಿ 188 ಕೋಟಿ ರೂ ವೆಚ್ಚದಲ್ಲಿ 220 ಕೆ.ವಿ ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದರು. ಕೆ.ಎಂ.ಉದಯ್, ರಮೇಶ್‌ಬಾಬುಬಂಡಿಸಿದ್ದೇಗೌಡ, ದಿನೇಶ್‌ಗೂಳಿಗೌಡ, ಸಿ.ಟಿ.ಶಂಕರ್, ಬಿ.ಬಸವರಾಜು, ಚಲುವರಾಜು, ಪಿ.ಸಂದರ್ಶ ಇದ್ದರು. 
ಮಂಡ್ಯ

ಅನುದಾನದ ಲೆಕ್ಕ ಜನ ಕೇಳಲಿ, ಸಂಸದರಲ್ಲ!

ಪ್ರಮುಖ ಮುಖ್ಯಾಂಶಗಳು

  • ಎಚ್‌ಡಿಕೆಗೆ ಎನ್.ಚಲುವರಾಯಸ್ವಾಮಿ ತಿರುಗೇಟು
ಮದ್ದೂರು : ರಾಜ್ಯ ಸರ್ಕಾರ ಜಿಲ್ಲೆಗೆ ಬಿಡುಗಡೆ ಮಾಡಿರುವ ಅನುದಾನದ ಲೆಕ್ಕವನ್ನು ಜಿಲ್ಲೆಯ ಜನತೆ ಕೇಳಬೇಕೆ ಹೊರತು ಸಂಸದರಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.
ತಾಲೂಕಿನ ಸೋಮನಹಳ್ಳಿ ಬಳಿ 188 ಕೋಟಿ ರೂ. ವೆಚ್ಚದಲ್ಲಿ 220 ಕೆವಿ ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಂಡ್ಯ ಜಿಲ್ಲೆಗೆ 10 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಅದರ ಅಂಕಿ ಅಂಶಗಳನ್ನು ಇಲಾಖಾವಾರು ನೀಡುವಂತೆ ಜಿಲ್ಲೆಯ ಸಂಸದರು ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಲೆಕ್ಕ ಕೇಳಿದ್ದಾರೆ. ಆದರ ಲೆಕ್ಕವನ್ನು ಜಿಲ್ಲೆಯ ಜನತೆ ಕೇಳಬೇಕೆ ಹೊರತು ಅವರಲ್ಲ. ಅವರೇನು ಜಿಲ್ಲೆಯ ಮತದಾರರಲ್ಲ. ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಜಿಲ್ಲೆಯ ಜನತೆ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಜನರ ನಿರೀಕ್ಷೆ ಹುಸಿಯಾಗದಂತೆ ಕೇಂದ್ರ ಸಚಿವರು ಕೆಲಸ ಮಾಡಲಿ, ಲೆಕ್ಕ ಕೊಡುವ ಸಮಯ ಬರುತ್ತದೆ. ಆಗ ಅಂಕಿ-ಅಂಶಗಳ ಪ್ರಕಾರ ದಾಖಲೆ ಸಹಿತ ನೀಡಲಾಗುವುದು ಎಂದು ಕುಟುಕಿದರು.
ಮೂರು ವರ್ಷಗಳಲ್ಲಿ ಇಡೀ ರಾಜ್ಯದಲ್ಲಿಯೇ ಮೈಸೂರು ಜಿಲ್ಲೆ ಹೊರತು ಪಡಿಸಿದರೆ ಎರಡನೇ ಸ್ಥಾನದಲ್ಲಿ ಅತಿ ಹೆಚ್ಚು ಅನುದಾನ ಬಿಡುಗಡೆಯಾಗಿರೋದು ಮಂಡ್ಯ ಜಿಲ್ಲೆಗೆ ಮಾತ್ರ. ಸ್ವಾತಂತ್ರ್ಯ ಬಂದ ನಂತರ ತೂಬಿನಕೆರೆ ಬಳಿ ಮಾತ್ರ 220 ಕೆವಿ ಸಬ್ ಸ್ಟೇಷನ್ ಮಾತ್ರ ಇತ್ತು. ನಂತರ ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ನಾಗಮಂಗಲದಲ್ಲಿತ್ತು. ಮದ್ದೂರಿಗೂ 220 ಕೆವಿ ಸಬ್ ಸ್ಟೇಷನ್ ನಿರ್ಮಾಣ ಮಾಡಬೇಕೆಂದು 25 ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ಆದರೆ, ಶಾಸಕ ಉದಯ್ ಅವರ 2 ವರ್ಷಗಳ ನಿರಂತರ ಪ್ರಯತ್ನದಿಂದಾಗಿ ಇಂದು ಚಾಲನೆ ನೀಡಲಾಗುತ್ತಿದೆ ಎಂದರು.
ಸರ್ಕಾರ ಬರೀ ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿಲ್ಲ. ಆದರ ಜತೆಗೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಿದ್ದೇವೆ. ಕೆಆರ್‌ಎಸ್ ಜಲಾಶಯ ನಿರ್ಮಾಣಗೊಂಡ ನಂತರ ಮಾಜಿ ಸಚಿವ ನಾಗೇಗೌಡ ಅವರ ಕಾಲದಲ್ಲಿ ಕೆಲವು ಭಾಗಗಳಲ್ಲಿ ನಾಲೆಗಳ ಆಧುನಿಕರಣ ಮಾಡಲಾಗಿತ್ತು. ಆನಂತರ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿಶ್ವೇಶ್ವರಯ್ಯ ನಾಲೆಗಳ ಆಧುನೀಕರಣ ಮಾಡಲಾಗುತ್ತಿದೆ. ಮೈಷುಗರ್ ಕಾರ್ಖಾನೆಗೆ 65 ಕೋಟಿ ರೂ. ವೆಚ್ಚದಲ್ಲಿ ಬಾಯ್ಲಿಂಗ್ ಹೌಸ್ ನಿರ್ಮಾಣಕ್ಕೆ ಗುರುವಾರ ಸಂಜೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಲಿದೆ. ಬಳಿಕ ಡಿಸ್ಟಿಲರಿ ವಿಭಾಗ ನಿರ್ಮಾಣ ಮಾಡಿದರೆ ಮೈಶುಗರ್ ಕಾರ್ಖಾನೆ ಯಾವುದೇ ಲೋಪದೋಷಗಳಿಲ್ಲದೆ ಕಾರ್ಯಾರಂಭ ಮಾಡಲಿದೆ ಎಂದರು.
ಸೂಳೆಕೆರೆ ಅಭಿವೃದ್ಧಿ, ಮದ್ದೂರು ನಗರದ ರಸ್ತೆ ವಿಸ್ತರಣೆ, 220 ಕೆವಿ ಸಬ್ ಸ್ಟೇಷನ್, ಕೆಮ್ಮಣ್ಣುನಾಲಾ ಅಭಿವೃದ್ಧಿ, ಗ್ರಾಮೀಣ ಪ್ರದೇಶಗಳ ರಸ್ತೆಗಳು, ಕುಡಿಯುವ ನೀರು ಸೇರಿದಂತೆ ಕ್ಷೇತ್ರದ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಶಾಸಕ ಉದಯ್ ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಶಾಸಕ ಕೆ.ಎಂ.ಉದಯ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ವರ್ಷದ ಯುಗಾದಿ ಹಬ್ಬದ ವೇಳೆಗೆ 220 ಕೆವಿ ಸಬ್ ಸ್ಟೇಷನ್ ಕಾಮಗಾರಿ ಉದ್ಘಾಟನೆಗೊಂಡು ರೈತರಿಗೆ ಹಾಗೂ ತಾಲೂಕಿನ ಜನತೆಗೆ ಅನುಕೂಲ ಕಲ್ಪಿಸಬೇಕು ಈ ಸಂಬಂಧ ನನ್ನಿಂದ ಯಾವುದೇ ಸಹಕಾರವನ್ನು ಅಧಿಕಾರಿಗಳು ಕೇಳಿದರೆ ನೀಡುತ್ತೇನೆ. ಅಧಿಕಾರಿಗಳು ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕ್ಷೇತ್ರದಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಸಮಸ್ಯೆಗಳ ಬಗ್ಗೆ ದಿನನಿತ್ಯ ಸಾಕಷ್ಟು ದೂರುಗಳನ್ನು ನೀಡುತ್ತಿದ್ದರು. ಹೀಗಾಗಿ, ಸರ್ಕಾರದಿಂದ 800 ಕೋಟಿ ರೂ.ಗೂ ಹೆಚ್ಚಿನ ಅನುದಾನದಲ್ಲಿ ಕೆರೆಗಳು ಮತ್ತು ನಾಲೆಗಳ ಆಧುನೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಶೀಘ್ರವಾಗಿ ಪೂರ್ಣಗೊಳ್ಳಲಿದೆ. ಹಲವು ವರ್ಷಗಳಿಂದ ತಲೆದೋರುತ್ತಿದ್ದ ವಿದ್ಯುತ್ ಸಮಸ್ಯೆ ಬಗ್ಗೆ ಸರ್ಕಾರದ ಹಂತದಲ್ಲಿ ಸಾಕಷ್ಟು ಹೋರಾಟ ಮಾಡಿ 188 ಕೋಟಿ ರೂ. ವೆಚ್ಚದಲ್ಲಿ 220 ಕೆವಿ ಸಬ್ ಸ್ಟೇಷನ್ ನಿರ್ಮಾಣ ಮಾಡಲಾಗುತ್ತಿದ್ದು, ಮುಂದಿನ ಒಂದು ವರ್ಷದೊಳಗೆ ಕಾಮಗಾರಿ ಮುಕ್ತಾಯವಾಗಲಿದೆ ಎಂದರು.
ಸಬ್ ಸ್ಟೇಷನ್ ನಿರ್ಮಾಣದಿಂದ ವಾರ್ಷಿಕವಾಗಿ 201 ಲಕ್ಷ ಯೂನಿಟ್ ಉಳಿತಾಯವಾಗುವುದರಿಂದ 16.49 ಕೋಟಿ ರೂ. ಉಳಿತಾಯವಾಗುವ ಜತೆಗೆ ತಾಲೂಕಿನ ಹತ್ತಾರು ಗ್ರಾಮಗಳು, ರೈತಾಪಿ ಜನರ ಕೃಷಿ ಪಂಪ್‌ಸೆಟ್, ಕುಡಿಯುವ ನೀರಿನ ಯೋಜನೆಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಅನುಕೂಲವಾಗಲಿದೆ. ಹೆಚ್ಚಿನ ಗ್ರಾಹಕರಿಗೆ ವಿದ್ಯುತ್ ಪೂರೈಸಬಹುದಾಗಿದೆ. ಜತೆಗೆ ಸೋಮನಹಳ್ಳಿ, ಗೆಜ್ಜಲಗೆರೆ ಕೈಗಾರಿಕಾ ಪ್ರದೇಶಗಳಿಗೆ ಅಡಚಣೆರಹಿತ ವಿದ್ಯುತ್ ಪೂರೈಸಬಹುದಾಗಿದೆ ಎಂದರು.
ಕ್ಷೇತ್ರದಲ್ಲಿ 1800 ಕೋಟಿ ರೂ.ಗೂ ಅಧಿಕ ಅನುದಾನ ತಂದು ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವುದನ್ನು ಸಹಿಸದೆ ವಿರೋಧಿಗಳು ನನ್ನ ವಿರುದ್ಧ ಅನಗತ್ಯ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಕ್ಷೇತ್ರದ ಮತದಾರರು ಕಿವಿಗೊಡಬಾರದು. ನನಗೆ ರಾಜಕೀಯ, ಅಧಿಕಾರ ಮುಖ್ಯವಲ್ಲ, ಕ್ಷೇತ್ರದ ಅಭಿವೃದ್ಧಿ ಜನರ ಹಿತ ಮುಖ್ಯವಾಗಿದೆ ಎಂದರು.
ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, 220 ಕೆವಿ ಸಬ್ ಸ್ಟೇಷನ್ ಯೋಜನೆಯನ್ನು ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ 188 ಕೋಟಿ ರೂ. ಅನುದಾನ ತಂದಿದ್ದಾರೆ. ಈ ಕಾಮಗಾರಿ ಪೂರ್ಣಗೊಂಡರೆ ಮದ್ದೂರು, ಶ್ರೀರಂಗಪಟ್ಟಣ, ನಾಗಮಂಗಲ, ಮಳವಳ್ಳಿ ತಾಲೂಕುಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ಹೊಸದಾಗಿ ಆಯ್ಕೆಯಾಗಿರುವ 38 ಶಾಸಕರಲ್ಲಿ ಕೆ.ಎಂ.ಉದಯ್ ಅತ್ಯಂತ ಕ್ರಿಯಾಶೀಲರಾಗಿ ಹಾಗೂ ಎಲ್ಲ ಸಚಿವರಿಗೂ ಆತ್ಮೀಯವಾಗಿರುವುದರಿಂದ ತಾಲೂಕಿಗೆ ಅತೀ ಹೆಚ್ಚು ಅನುದಾನ ಬಿಡುಗಡೆಗೊಳಿಸಿ ಶಾಶ್ವತ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವ ಮೂಲಕ ಜನ ಮನ್ನಣೆಗಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಬಿ.ಬಸವರಾಜು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ನಿರ್ದೇಶಕ ಪಿ.ಸಂದರ್ಶ್, ಗ್ರಾಪಂ ಮಾಜಿ ಅಧ್ಯಕ್ಷ ಸಿ.ಟಿ.ಶಂಕರ್, ಗುತ್ತಿಗೆದಾರ ಶಿವಶಂಕರ್, ಮುಖಂಡ ತೈಲೂರು ರಘು, ಜಿಲ್ಲಾ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಭಾರತೀ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀವ್, ಮುನ್ ಮುಲ್ ನಿರ್ದೇಶಕ ಹರೀಶ್ ಬಾಬು, ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಶಂಕರೇಗೌಡ, ಸೆಸ್ಕ್ ಇಲಾಖೆಯ ಎಸ್‌ಇ ವೆಂಕಟೇಶ್, ಇಇಗಳಾದ ಕಿಶೋರ್, ಶಿವಕುಮಾರ್, ಕಿರಣ್ ಮತ್ತಿತರರು ಇದ್ದರು.