ಮಂಡ್ಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯನ್ನು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಜಿ.ಎನ್.ಸುಬ್ರಹ್ಮಣ್ಯ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಾ.ಕುಮಾರ, ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಕೆ.ಆರ್.ನಂದಿನಿ, ವೆಂಕಟೇಶ್, ಬಿ.ಸಿ.ಶಿವಾನಂದಮೂರ್ತಿ, ಎಸ್.ಇ.ಗಂಗಾಧರಸ್ವಾಮಿ, ಬಿ.ಎಸ್.ಅನುಪಮಾ ಇತರರಿದ್ದರು. 
ಮಂಡ್ಯ

ಜನರು ಕಾನೂನಿನ ಜ್ಞಾನ ತಿಳಿದುಕೊಳ್ಳಲಿ: ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಜಿ.ಎನ್.ಸುಬ್ರಹ್ಮಣ್ಯ ಸಲಹೆ

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ
  • ಕಾನೂನು ಜ್ಞಾನ ಇಲ್ಲವಾದಲ್ಲಿ ಕೋರ್ಟ್ ಕಚೇರಿ ಅಲೆದಾಡಬೇಕಾಗುತ್ತದೆ
  • ದುರ್ಬಲ ವರ್ಗದ ಸಾರ್ವಜನಿಕರಿಗೆ ಉಚಿತವಾಗಿ ಕಾನೂನು ಸೇವೆ
ಮಂಡ್ಯ: ನ್ಯಾಯಾಲಯಗಳಲ್ಲಿ ನ್ಯಾಯ ದೊರಕಿಸಲು ಕಾನೂನು ಸೇವೆಗಳ ಪ್ರಾಧಿಕಾರ ಸಾರ್ವಜನಿಕರಿಗೆ ಸಹಾಯ ಮಾಡುತ್ತದೆ ಎಂದು ಶೇ.90ರಷ್ಟು ಜನರಿಗೆ ತಿಳಿದಿಲ್ಲ. ಜನರಿಗೆ ಕಾನೂನು ಜ್ಞಾನ ಇರಬೇಕು. ಕಾನೂನು ಜ್ಞಾನ ಇಲ್ಲವಾದಲ್ಲಿ ಕೋರ್ಟ್ ಕಚೇರಿ ಅಲೆದಾಡಬೇಕಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಜಿ.ಎನ್.ಸುಬ್ರಹ್ಮಣ್ಯ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದೊಂದಿಗೆ ಆಯೋಜಿಸಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ಸೇವೆಗಳ ಪ್ರಾಧಿಕಾರ ದುರ್ಬಲ ವರ್ಗದವರು, ಶೋಷಿತರ ಕಾನೂನು ಅರಿವು ಹಾಗೂ ತಿಳಿವಳಿಕೆ ಮೂಡಿಸುವ ಕಾರ್ಯ ನಿರ್ವಹಿಸುತ್ತಿದೆ. ದುರ್ಬಲ ವರ್ಗದ ಸಾರ್ವಜನಿಕರಿಗೆ ಉಚಿತವಾಗಿ ಕಾನೂನು ಸೇವೆಗಳನ್ನು ಕೊಡುವ ವ್ಯವಸ್ಥೆ ಜಾರಿಯಲ್ಲಿದೆ. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಕುರಿತಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕುಮಾರ, ಅಧಿಕಾರಿಗಳು ಕಾನೂನಡಿ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಮನದಟ್ಟು ಮಾಡಿಕೊಳ್ಳುವುದರ ಜತೆಗೆ ಕಾನೂನಿನ ರಕ್ಷಣೆ ಮಾಡಬೇಕು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧ್ವನಿ ಇಲ್ಲದವರಿಗೆ ಧ್ವನಿ ನೀಡುವ ಕಾರ್ಯ ನಿರ್ವಹಿಸುತ್ತಿದೆ. ಕಾನೂನಿನ ನಿಯಮಗಳು ಉಲ್ಲಂಘನೆಗೊಳ್ಳದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.
ಎಷ್ಟೋ ಜನಗಳಿಗೆ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ಕಾನೂನು ಸೇವೆಗಳನ್ನು ಪಡೆಯಬಹುದು ಎಂಬುದು ತಿಳಿದೇ ಇಲ್ಲ. ಅಧಿಕಾರಿಗಳು ತಮ್ಮ ತಮ್ಮ ಕಚೇರಿಗಳಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ನಾಮಫಲಕಗಳು ಅಳವಡಿಸುವ ಮೂಲಕ ಅರಿವು ಮೂಡಿಸಿ, ಕಾನೂನು ಮತ್ತು ನಿಯಮಗಳು ಜೀವನದುದ್ದಕ್ಕೂ ನಮ್ಮ ಜೊತೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಕಾನೂನು ಪಾಲನೆಗಳಿಗಿಂತ ಕಾನೂನು ಉಲ್ಲಂಘಿಸುವವರು ಹೆಚ್ಚಾಗುತ್ತಿದ್ದಾರೆ. ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಇವೆಲ್ಲವೂ ನಿಲ್ಲಬೇಕು. ಕಾನೂನು ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ಮಾತನಾಡಿ, ಕಾನೂನು ಸೇವೆಗಳ ಪ್ರಾಧಿಕಾರದಿಂದ ಮಕ್ಕಳು, ಮಹಿಳೆಯರು, ದುರ್ಬಲ ವರ್ಗದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಉಚಿತವಾಗಿ ಕಾನೂನು ಸೇವೆಗಳನ್ನು ಪಡೆಯಲು ಅವಕಾಶ ಇದೆ. ಅಧಿಕಾರಿಗಳು ನಿಜವಾಗಿಯೂ ಕಾನೂನು ನೆರವು ಅಗತ್ಯವಿರುವ ಜನರಿಗೆ ಇದರ ಕುರಿತಾಗಿ ಮಾಹಿತಿ ನೀಡಿ ಎಂದು ಹೇಳಿದರು.
ಕಾನೂನು ಸೇವೆಗಳ ಪ್ರಾಧಿಕಾರದ ಕುರಿತಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ವಿಶೇಷ ಶಿಬಿರಗಳನ್ನು ಆಯೋಜಿಸಿ, ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಕ್ರಿಮಿನಲ್, ಸಿವಿಲ್ ಹಾಗೂ ಅರೆ ನ್ಯಾಯಾಲಯಗಳಲ್ಲೂ ಕೂಡ ಸೇವೆ ಪಡೆಯಬಹುದು ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಎಂ.ಆನಂದ್ ಮಾತನಾಡಿ, ಮಕ್ಕಳು, ಮಹಿಳೆಯರು, ಕಾರ್ಮಿಕರಿಗೆ ಹಾಗೂ 3 ಲಕ್ಷ ರೂಗಿಂತ ಕಡಿಮೆ ಆದಾಯ ಇರುವ ಎಲ್ಲ ಜಾತಿ ವರ್ಗದ ಜನರಿಗೆ ಉಚಿತ ಕಾನೂನು ಸೇವೆ ಹಾಗೂ ಅರಿವು ನೀಡಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಅನೇಕ ಕಾನೂನು ಅರಿವುಗಳ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಜಿಲ್ಲೆಯನ್ನು ಬಾಲ್ಯವಿವಾಹ, ಭ್ರೂಣ ಹತ್ಯೆ ಮುಕ್ತ ಹಾಗೂ ಎಲ್ಲರಿಗೂ ನ್ಯಾಯ ಒದಗಿಸುವ ಎಲ್ಲ ಇಲಾಖೆಗಳ ಜತೆ ಸಮನ್ವಯ ಸಾಧಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಇ.ಗಂಗಾಧರಸ್ವಾಮಿ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಇತರರಿದ್ದರು.