ಕೆ.ಎಂ.ದೊಡ್ಡಿಯ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು.ದೊ.ಚಿ.ಗೌಡ, ಡಿ.ಕೆ.ಲತಾ, ಮಹೇಂದ್ರ, ಶಂಕರೇಗೌಡ ಇತರರಿದ್ದರು. 
ಮಂಡ್ಯ

ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ದೊರೆಯಲಿ

ಪ್ರಮುಖ ಮುಖ್ಯಾಂಶಗಳು

  • ರೈತ ಕವಿ ದೊ.ಚಿ.ಗೌಡ ಅಭಿಮತ
  • ಕನ್ನಡ ರಾಜ್ಯೋತ್ಸವ
  • ಸಾಧಕರಿಗೆ ಸನ್ಮಾನ
ಕೆ.ಎಂದೊಡ್ಡಿ: ಕನ್ನಡ ನಮ್ಮ ನಾಡಿನ ಜನರ ಅಸ್ತಿತ್ವ ಮತ್ತು ಅಸ್ಮಿತೆ. ಕನ್ನಡವನ್ನು ಬರೀ ಭಾಷೆಯನ್ನಾಗಿ ನೋಡದೆ ನಮ್ಮ ಬದುಕಾಗಿ ಕಾಣಬೇಕು. ನಾವೆಲ್ಲರೂ ಸಂಘಟಿತರಾಗಿ ಭಾಷೆ ಉಳಿವಿಗೆ ಶ್ರಮಿಸಬೇಕು ಎಂದು ರೈತ ಕವಿ ದೊ.ಚಿ.ಗೌಡ ಕರೆ ನೀಡಿದರು.
ಇಲ್ಲಿನ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಕನ್ನಡ ಹೋರಾಟಗಾರರ ವೇದಿಕೆ ವತಿಯಿಂದ ಶನಿವಾರ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆ ಶ್ರೀಮಂತಿಕೆ ಪ್ರಾಚೀನ ಕಾಲದಿಂದಲೂ ಬಂದಿದೆ. ಕ್ರಿಸ್ತ ಪೂರ್ವ 450ನೇ ಶತಮಾನದದಿಂದ ಆರಂಭಗೊಂಡು ಕದಂಬ ರಾಜ ಮನೆತನದ ಶ್ರೇಷ್ಠಕವಿ ಪಂಪನಿಂದ ಇಲ್ಲಿಯವರೆಗೂ ಅನೇಕ ಕವಿ ಮಾನ್ಯರ ಹೋರಾಟಗಳು ಕಾರಣವಾಗಿದೆ ಎಂದರು.
ರಾಜ್ಯದ ಅಗ್ರಮಾನ್ಯ ಸಾಹಿತಿಗಳಾದ ಕುವೆಂಪು ಸೇರಿದಂತೆ ಚಂದ್ರಶೇಖರ್ ಕಂಬಾರರವರೆಗೆ ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ನಮ್ಮ ಕನ್ನಡ ಭಾಷೆಯನ್ನು ಉತ್ತುಂಗಗೊಳಿಸಿ ನಾಡು-ನುಡಿ ಹಾಗೂ ಕನ್ನಡ ನಾಡಿನ ಕಲೆ, ಸಂಸ್ಕೃತಿಯ ಕುರಿತಾಗಿ ಸಮೃದ್ಧ ಸಾಹಿತ್ಯ ರಚಿಸಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು.
ಕನ್ನಡ ಭಾಷೆ ಶಾಸ್ತ್ರೀಯ ಸ್ಥಾನಮಾನ ಹೊಂದಿದ್ದರೂ ಕನ್ನಡವನ್ನು ಕಡ್ಡಾಯ ಭಾಷೆ ಕಲಿಕೆಗೆ ಹಾಗೂ ಕನ್ನಡಿಗರಿಗೆ ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ಸರ್ಕಾರ ಮುಂದಾಗಬೇಕು. ನಾಡು ನುಡಿ, ಭಾಷೆ ಮತ್ತು ಕನ್ನಡಿಗರ ಹಿತ ಕಾಯಬೇಕು ಎಂದು ಆಗ್ರಹಿಸಿದರು.
ಹನುಮಂತನಗರದ ಭಾರತೀ ಸಂಯುಕ್ತ ವಸತಿ ಕಾಲೇಜಿನ ಉಪನ್ಯಾಸಕ ಶಿವಲಿಂಗೇಗೌಡ ಮಾತನಾಡಿ, ಕನ್ನಡ ನೆಲವು ಹಲವು ಕವಿಗಳು, ಸಾಹಿತಿಗಳು ಹಾಗೂ ಕಲಾವಿದರಿಗೆ ಜನ್ಮ ನೀಡಿದೆ. ಕನ್ನಡನಾಡಿನ ಸಾಹಿತ್ಯ ಲೋಕದ ಶ್ರೀಮಂತಿಕೆಗೆ ಸಾಕ್ಷಿ. ಬಸವಣ್ಣನವರ ವಚನಗಳು, ದಾಸರ ಕೀರ್ತನೆಗಳು, ಕವಿಗಳ ಕಾವ್ಯಗಳು ನಮ್ಮ ಅಸ್ಮಿತೆಯಾಗಿದೆ ಎಂದರು.
ರಾಜ್ಯದಲ್ಲೇ ಅತಿ ಹೆಚ್ಚು ಕನ್ನಡ ಮಾತನಾಡುವ ಜನರಿರುವುದು ಮಂಡ್ಯ ಜಿಲ್ಲೆಯಲ್ಲಿ. ಕನ್ನಡವನ್ನು ನಾವು ಹೆಚ್ಚು ಬಳಕೆ ಮಾಡುವ ಮೂಲಕ ಭಾಷೆ ಶ್ರೀಮಂತಿಕೆಯನ್ನು ಎತ್ತಿ ಹಿಡಿಯಬೇಕು. ಕನ್ನಡನಾಡು, ಜಲ, ಭಾಷೆ, ಸಂಸ್ಕೃತಿ ರಕ್ಷಣೆಗೆ ಕಟಿಬದ್ಧವಾಗಿರೋಣ ಎಂದು ಪ್ರತಿಜ್ಞೆ ಮಾಡೋಣ. ಭಾಷೆಗೆ ತೊಂದರೆಯಾದರೆ ಒಗ್ಗಟ್ಟಿನಿಂದ ಸಂಘಟನೆಗಳ ಸಹಕಾರರೊಂದಿಗೆ ಪ್ರತಿಯೊಬ್ಬ ಕನ್ನಡಿಗನ ಮನೆ ಮನಗಳಲ್ಲಿ ಬಿತ್ತಿ ಬೆಳೆಸಲು ಶ್ರಮಿಸೋಣ ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಾದ ಆಸರೆ ಸೇವಾ ಟ್ರಸ್ಟ್ ಅಧ್ಯಕ್ಷ ರಘು ವೆಂಕಟೇಗೌಡ, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಮಕ್ಕಳ ತಜ್ಞ ಡಾ.ಮೋಹನ್ ಬಾಬು ಹಾಗೂ ಕನ್ನಡ ಪರ ಹೋರಾಟಗಾರ, ತಾಲೂಕು ಕರವೇ ಅಧ್ಯಕ್ಷ ಮಣಿಗೆರೆ ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಡಿ.ಕೆ.ಲತಾ, ರೈತ ಮುಖಂಡ ಅಣ್ಣೂರು ಮಹೇಂದ್ರ, ಸಿ.ಎ.ಕೆರೆ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ತೊರೆಚಾಕನಹಳ್ಳಿ ಶಂಕರೇಗೌಡ, ಆಯೋಜಕರಾದ ಕರಡಕೆರೆ ಯೋಗೇಶ್, ಗುರುದೇವರಹಳ್ಳಿ ನವೀನ್ ಗೌಡ, ಟಿಬಿ ಹಳ್ಳಿ ಸಂತೋಷ, ಕ್ಯಾತಘಟ್ಟ ಪ್ರಸಾದ್, ಗ್ರಾಪಂ ಸದಸ್ಯ ಕಾರ್ಕಳ್ಳಿ ಮಹೇಶ್, ಅಣ್ಣೂರು ರಂಜಿತ್, ವಿಕಾಸ್, ಬೋರೇಗೌಡ , ಜಯಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.