ಮದ್ದೂರು ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ವಾರ್ಷಿಕ ಮಹಾ ಸಭೆಯಲ್ಲಿ ಶಾಸಕ ಕೆ.ಎಂ.ಉದಯ್ ಅವರನ್ನು ಅಭಿನಂದಿಸಲಾಯಿತು. ಶಿವನಂಜಯ್ಯ, ರವೀಶ್, ಸತೀಶ್, ಸುರೇಶ್, ರಾಮಲಿಂಗಯ್ಯ, ಧನಂಜಯ ಇದ್ದರು. 
ಮಂಡ್ಯ

ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಲಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ.ಎಂ.ಉದಯ್
  • ತಾಲೂಕು ಪಂಚಾಯತಿ ಸಭಾಂಗಣ
ಮದ್ದೂರು: ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮದ್ದೂರು ತಾಲೂಕು ಶಾಖೆ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರದ ಮಹತ್ವದ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ತಲುಪಿಸುವ ಮೂಲಕ ಅವರ ಹಿತ ಕಾಯುವುದು ಜನಪ್ರತಿನಿಧಿಗಳು ಮತ್ತು ಸರ್ಕಾರಿ ನೌಕರರ ಕರ್ತವ್ಯವಾಗಿದೆ ಎಂದರು.
ನಾನು ಶಾಸಕನಾಗಿ ಆಯ್ಕೆಯಾಗುವ ಮೊದಲು ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿತ್ತು. ಬಳಿಕ ಅತಿ ಅವಶ್ಯಕವಾಗಿರುವುದನ್ನು ಪಟ್ಟಿ ಮಾಡಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿದ ಬಳಿಕ ಈವರೆಗೂ 1800 ಕೋಟಿ ರೂ.ಅನುದಾನ ತರಲಾಗಿದೆ. ಈ ಅಭಿವೃದ್ಧಿಗೆ ನಿಮ್ಮಗಳ ಸಹಕಾರ ಮುಖ್ಯವಾಗಿದ್ದು, ಇದರಲ್ಲಿ ಯಾವುದೇ ಲೋಪವಾಗದಂತೆ ಕರ್ತವ್ಯ ನಿರ್ವಹಿಸುವುದು ನಿಮ್ಮ ಜವಾಬ್ದಾರಿ ಎಂದರು.
15 ದಿನಗಳಲ್ಲಿ ತಾಲೂಕು ಪಂಚಾಯತಿ ನೂತನ ಕಟ್ಟಡಕ್ಕೆ ಚಾಲನೆ ನೀಡಿ ಶೀಘ್ರ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲಾಗುವುದು. ಇನ್ನು ಬಾಡಿಗೆ ಕಟ್ಟಡಗಳಲ್ಲಿರುವ ತಾಲೂಕು ಮಟ್ಟದ ಕಚೇರಿಗಳಿಗೂ ಸ್ವಂತ ಕಟ್ಟಡಗಳ ಒದಗಿಸಲು ಯೋಜನೆ ರೂಪಿಸಲಾಗಿದೆ. ನಿಮ್ಮ ಇಲಾಖೆಗಳ ಸಮಸ್ಯೆಗಳನ್ನು ನನ್ನ ಬಳಿ ಬಂದು ಮುಕ್ತವಾಗಿ ಚರ್ಚಿಸಿದ್ದಲ್ಲಿ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಲು ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ಕಳೆದ ವರ್ಷದ ವೈದ್ಯಕೀಯ ವೆಚ್ಚ ಹಾಗೂ ಇತರ ಅನುದಾನ ಸೇರಿ 68 ಲಕ್ಷ ರೂ. ಬಿಡುಗಡೆಯಾಗಬೇಕಿದ್ದು, ಆದಷ್ಟು ಬೇಗ ಅನುದಾನ ಬಿಡುಗಡೆ ಮತ್ತು ನೌಕರರ ಸಂಘದ ಮೇಲಂತಸ್ತು ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವಂತೆ ಸಂಘದ ವತಿಯಿಂದ ಶಾಸಕರಿಗೆ ಮನವಿ ಸಲ್ಲಿಸಲಾಯಿತು.
ನೌಕರರ ಸಂಘದ ತಾಲೂಕು ಗೌರವಾಧ್ಯಕ್ಷ ಶಿವನಂಜಯ್ಯ, ತಾಲೂಕು ಅಧ್ಯಕ್ಷ ರವೀಶ್, ಪ್ರಧಾನ ಕಾರ್ಯದರ್ಶಿ ಸತೀಶ್, ಖಜಾಂಚಿ ಸುರೇಶ್, ತಾಪಂ ಇಒ ರಾಮಲಿಂಗಯ್ಯ, ಬಿಇಒ ಧನಂಜಯ, ಸಿಡಿಪಿಒ ಅರುಣ್ ಕುಮಾರ್, ನಿರ್ದೇಶಕರಾದ ಮಣಿ, ಹರ್ಷ, ಮರೀಗೌಡ, ಮಂಜುನಾಥ, ಪರಮೇಶ್ವರ್ ಇತರರಿದ್ದರು.