ಮದ್ದೂರು ತಾಲೂಕಿನ ಮಲ್ಲನಕುಪ್ಪೆ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಸಾಯಿ ಎಕ್ಸ್ ಪೊರ್ಟ್ ಪ್ರೈ.ಲಿ ವತಿಯಿಂದ ನಿರ್ಮಿಸುತ್ತಿರುವ ಶಾಲಾ ಕಟ್ಟಡ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು. ಧನಂಜಯ, ಪಿ.ಸಂದರ್ಶ, ಹರೀಶ್‌ಬಾಬು, ಕುಮಾರ್, ಲೋಕೇಶ್, ಸೋಮಶೆಟ್ಟಿ, ಆಶಾ, ನರಸಿಂಹಯ್ಯ ಇದ್ದರು. 
ಮಂಡ್ಯ

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಲಿ

ಪ್ರಮುಖ ಮುಖ್ಯಾಂಶಗಳು

  • government schools
ಮದ್ದೂರು: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರದ ಜತೆಗೆ ಹಳೆಯ ವಿದ್ಯಾರ್ಥಿಗಳು, ದಾನಿಗಳು, ಸಂಘ, ಸಂಸ್ಥೆಗಳು ಹಾಗೂ ಕಾರ್ಖಾನೆಗಳು ಕೈ ಜೋಡಿಸಬೇಕೆಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಮಲ್ಲನಕುಪ್ಪೆ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಸಾಯಿ ಎಕ್ಸ್ ಪೊರ್ಟ್ ಪ್ರೈ.ಲಿ ವತಿಯಿಂದ ಅಂದಾಜು 30 ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕಟ್ಟಡ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಕ್ಷೇತ್ರದಲ್ಲಿರುವ ಕಾರ್ಖಾನೆಗಳು ತಮ್ಮ ಆರ್ಥಿಕ ವಹಿವಾಟಿನಲ್ಲಿ ಶೇ.2 ರಷ್ಟು (ಸಿಎಸ್‌ಆರ್ ನಿಧಿ) ಹಣವನ್ನು ಕಡ್ಡಾಯವಾಗಿ ವಿವಿಧ ಸಾಮಾಜಿಕ ಅಭಿವೃದ್ಧಿಗೆ ಕಾರ್ಯಗಳಿಗೆ ಬಳಕೆ ಮಾಡಬೇಕು. ಈ ನಿಟ್ಟಿನಲ್ಲಿ ಸಿಎಸ್‌ಆರ್ ಅನುದಾನವನ್ನು ಶಾಲೆಗಳ ಅಭಿವೃದ್ಧಿಗೆ ಬಳಸಲು ಮೊದಲ ಪ್ರಾಶಸ್ತ್ಯ ನೀಡಲಾಗಿದೆ ಎಂದರು.
ಈಗಾಗಲೇ ಸರ್ಕಾರದ ವಿಶೇಷ ಅನುದಾನದ ಜತೆಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದಲೂ ಶಾಲಾ ಕಟ್ಟಡಗಳ ನಿರ್ಮಾಣ ಮತ್ತು ಪ್ರತಿ ವರ್ಷವೂ ಕ್ಷೇತ್ರದ ಶಾಲಾ ಮಕ್ಕಳ ಶುಲ್ಕ, ಶಾಲಾ ಬ್ಯಾಗ್ ಹಾಗೂ ಪರಿಕರಗಳ ವಿತರಣೆ ಮಾಡಲಾಗುತ್ತಿದೆ. ಗ್ರಾಮಾಂತರ ಪ್ರದೇಶಗಳ ವಿದ್ಯಾರ್ಥಿಗಳಲ್ಲಿ ಆಗಾಧವಾದ ಪ್ರತಿಭೆಯಿದ್ದು, ಇವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿ ನೀಡಿದರೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲಿದ್ದಾರೆ ಎಂದರು.
ಬಿಇಒ ಧನಂಜಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು, ಎಸ್‌ಡಿಎಂಸಿ ಅಧ್ಯಕ್ಷ ಕುಮಾರ್, ಲೋಕೇಶ್, ಪ್ರಾಂಶುಪಾಲ ಸೋಮಶೆಟ್ಟಿ, ಮುಖ್ಯ ಶಿಕ್ಷಕರಾದ ಆಶಾ, ನರಸಿಂಹಯ್ಯ, ಮುಖಂಡರಾದ ಮಂಜು, ಯೋಗೇಶ್, ಮಧು, ತಿಮ್ಮಯ್ಯ ಸೇರಿದಂತೆ ಇತರರಿದ್ದರು.