ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ, ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಮಗುವಿನ ಬಾಯಿಗೆ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 
ಮಂಡ್ಯ

ಪ್ರತಿ ಪಾಲಕರಲ್ಲ್ಲೂ ಜಾಗೃತಿ ಮೂಡಲಿ

ಲೋಕೇಶ್ ಮನು. ಡಿ
ಶ್ರೀರಂಗಪಟ್ಟಣ: ಪೋಲಿಯೋಮುಕ್ತ ವಿಶ್ವ ನಿರ್ಮಾಣಕ್ಕಾಗಿ ಕಡ್ಡಾಯವಾಗಿ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಶಾಸಕ, ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಹೇಳಿದರು.
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಹಿನ್ನೆಯಲ್ಲಿ ಮಗುವಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದರು.
ಸಾರ್ವಜನಿಕರು ತಮ್ಮ ಮಕ್ಕಳ ಉತ್ತಮ ಆರೋಗ್ಯ ಹಿತದೃಷ್ಟಿಯಿಂದ ನವಜಾತ ಶಿಶುವಿನಿಂದ ಹಿಡಿದು 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ತಪ್ಪದೆ ಪಲ್ಸ್ ಪೋಲಿಯೋ ಹನಿ ಹಾಕಿಸಬೇಕು. ಇತರ ಪಾಲಕರಿಗೂ ಸಲಹೆ ನೀಡಿ ಹಾಕಿಸುವಂತೆ ಜಾಗೃತಿ ನೀಡಬೇಕು ಎಂದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಆಶಾಲತಾ ಮಾತನಾಡಿ, ತಾಲೂಕಿನಾದ್ಯಂತ 11,676 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ 69 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. 276 ಸಿಬ್ಬಂದಿ ಹಾಗೂ 14 ಜನ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಹಾಗೆಯೇ ಪ್ರಮುಖ ಪ್ರವಾಸಿ ತಾಣಗಳಲ್ಲಿಯೂ ಕೂಡ ಪೋಲಿಯೋ ಬೂತ್‌ಗಳನ್ನು ತೆರೆಯಲಾಗಿದೆ. ಪಾಲಕರು ತಮ್ಮ ಮಕ್ಕಳಿಗೆ ತಪ್ಪದೆ ಪಲ್ಸ್ ಪೋಲಿಯೋ ಹಾಕಿಸಿ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದರು.
ಪುರಸಭಾ ಮಾಜಿ ಅಧ್ಯಕ್ಷ ಎಂ ಎಲ್.ದಿನೇಶ್, ಮಾಜಿ ಸದಸ್ಯ ಗಂಜಾಂ ಕೃಷ್ಣಪ್ಪ, ತಾಪಂ ಇಒ ವೇಣು, ಸಿಡಿಪಿಒ ಸಕಲೇಶ್ವರ, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ರವಿಕುಮಾರ್ ಎಸ್.ದೇವರಾಜು, ಜಿ.ಎಸ್.ಅನಿಲ್ ಕುಮಾರ್ , ಆರ್.ಇಮ್ರಾನ್, ಪಿ.ಆರ್.ರಾಧಾ, ಮುಖಂಡರಾದ ಲೋಕೇಶ್, ಸಾರ್ವಜನಿಕ ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಡಾ.ವಿಜಯಲಕ್ಷ್ಮೀ, ಮಕ್ಕಳ ತಜ್ಞ ಡಾ.ಶ್ರೀಧರ್, ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ.ಸವಿತಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ್ ಹಾಗೂ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಇತರರು ಇದ್ದರು.