ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ನೇಗಿಲು ಸೌಹಾರ್ಧ ಸಹಕಾರ ಸಂಘದಿಂದ ಬುಧವಾರ ಆಯೋಜಿಸಿದ್ದ ಸದಸ್ಯರ ಸಭೆಯನ್ನು ಜಿಲ್ಲಾ ಸೌಹಾರ್ದ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಿ.ಟಿ.ಗುರುರಾಜ್ ಉದ್ಘಾಟಿಸಿದರು. ಪಿ.ಎಸ್.ಚಂದ್ರಶೇಖರ್, ನಾಗರಾಜು, ಗುರುಪ್ರಸಾದ್ ಬಂಗೇರ, ಮರಳಗಾಲ ಮಂಜುನಾಥ್ ಇದ್ದರು. 
ಮಂಡ್ಯ

ಶ್ರಮಿಕರು, ರೈತರ ಅಭಿವೃದ್ಧಿಗೆ ಸಹಕಾರ ಸಂಘಗಳು ಶ್ರಮಿಸಲಿ

ಶ್ರೀರಂಗಪಟ್ಟಣ: ಜಿಲ್ಲೆಯಲ್ಲಿ ಶ್ರಮಿಕರು ಮತ್ತು ರೈತಾಪಿ ಜನರ ಶ್ರೇಯೋಭಿಲಾಷೆಗಾಗಿ ಸಹಕಾರ ಸಂಘಗಳು ಸ್ಥಾಪನೆಗೊಂಡು ಉನ್ನತವಾಗಿ ಬೆಳೆಯಬೇಕು ಹಾಗೂ ಪರಸ್ಪರ ಸಹಕಾರ ಮನೋಭಾವದೊಂದಿಗೆ ಸಂಘಗಳು ಅಭಿವೃದ್ಧಿಯತ್ತ ಮುನ್ನಡೆಯಬೇಕು ಎಂದು ಮಂಡ್ಯ ಜಿಲ್ಲಾ ಸೌಹಾರ್ದ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಿ.ಟಿ.ಗುರುರಾಜ್ ತಿಳಿಸಿದರು.
ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನೇಗಿಲು ಸೌಹಾರ್ದ ಸಹಕಾರ ಸಂಘದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸಂಘದ ಉದ್ಘಾಟನೆ ಹಾಗೂ ಪ್ರಥಮ ಸದಸ್ಯರ ಸಭೆಯಲ್ಲಿ ಮಾತನಾಡಿ, ಸಹಕಾರಿ ಸಂಘಗಳು ಸರ್ವರ ಏಳಿಗೆ ಮತ್ತು ಕಷ್ಟಕಾಲದಲ್ಲಿ ನೆರವು ಪಡೆಯಲು ಅತ್ಯಗತ್ಯ. ಇವುಗಳು ಸ್ಥಳಿಯವಾಗಿ ಆರ್ಥಿಕವಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುವ ಜತೆಗೆ ಸಮಾಜದಲ್ಲಿ ಸ್ಥಾನಮಾನ ಕಲ್ಪಿಸುವಲ್ಲೂ ಪ್ರಾಮುಖ್ಯತೆ ವಹಿಸಲಿವೆ. ಸಂಘದಲ್ಲಿ ಸಾಲ ಪಡೆಯುವ ಸದಸ್ಯರು ಸಕಾಲಕ್ಕೆ ಮರು ಪಾವತಿ ಮಾಡಿ, ಬೆಳವಣಿಗೆಗೆ ಪೂರಕವಾಗಬೇಕು ಎಂದು ಸಲಹೆ ನೀಡಿದರು.
ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ.ಎಸ್.ಚಂದ್ರಶೇಖರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸದಸ್ಯರನ್ನು ಸೇರಿಸಿಕೊಂಡು ಸಹಕಾರಿ ಸಂಘದಂತಹ ಸಂಸ್ಥೆ ಹುಟ್ಟು ಹಾಕುವುದು ಸುಲಭದ ಮಾತಲ್ಲ. ಜನರ ಸ್ಥಿತಿಗತಿಗಳನ್ನು ಸುಸ್ಥಿರಗೊಳಿಸಿ, ಆರ್ಥಿಕವಾಗಿ ಸುಧಾರಿಸಲು ಈ ಸಂಘ ಮಾದರಿಯಾಗಿ ಬೆಳವಣಿಗೆಯಾಗಲಿ. ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯ ಆಡಳಿತದಿಂದ ಎಲ್ಲರ ನಂಬಿಕೆ ಮತ್ತು ವಿಶ್ವಾಸಗಳಿಸಲಿ ಎಂದು ಶುಭಹಾರೈಸಿದರು.
ನೇಗಿಲು ಸೌಹಾರ್ಧ ಸಹಕಾರಿ ಸಂಘದ ಅಧ್ಯಕ್ಷ ಮರಳಗಾಲ ಮಂಜುನಾಥ್ ಮಾತನಾಡಿ, ಪ್ರಸ್ತುತ ಸಂಘದಲ್ಲಿ 140 ಸದಸ್ಯರು ಸದಸ್ಯತ್ವ ಪಡೆದಿದ್ದಾರೆ. 1,350 ರೂ.ಗಳನ್ನು ಪಾವತಿಸಿ ಸದಸ್ಯತ್ವ ಪಡೆಯಬಹುದಾಗಿದ್ದು, ಸದಸ್ಯರಿಗೆ ಒಂದು ಸಾವಿರ ರೂ. ಬಾಂಡ್ ವಿತರಣೆಯಾಗಲಿದೆ. ಜತೆಗೆ ಮೊದಲಿಗೆ 10 ಸಾವಿರ ರೂ.ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ನೀಡಲಾಗುವುದು. ಸಾಲ ತೀರಿದ ಬಳಿಕ 25 ಸಾವಿರ ರೂ., ನಂತರದಲ್ಲಿ ಹಂತ ಹಂತವಾಗಿ ಸಾಲದ ಮೊತ್ತವನ್ನು ಹೆಚ್ಚಿಸಿ ಸೌಹಾರ್ಧಯುತವಾಗಿ ಸಂಘವನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಪಾಲಹಳ್ಳಿ ಗ್ರಾಮದ ಸಹಕಾರ ಸಂಘದ ಅಧ್ಯಕ್ಷ ನಾಗರಾಜು, ಕ.ರ.ಸೌ.ಸಂ.ಸಹಕಾರಿ ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ, ಬಿಜೆಪಿ ಮಹಿಳಾ ಮೋರ್ಚ ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಶಕುಂತಲ, ಗ್ಯಾರಂಟಿ ಯೋಜನೆಯ ವೀಣಾ ಶಂಕರ್, ಸಂಘದ ಉಪಾಧ್ಯಕ್ಷೆ ಸಾವಿತ್ರಮ್ಮ, ಶಂಕರ್, ಬಲರಾಮ್, ನಿರ್ದೇಶಕರಾದ ಮಹೇಂದ್ರ, ಚೇತನ್ ಕುಮಾರ್, ರಾಘವೇಂದ್ರ, ಭಾರತಿ, ರೂಪಾ, ಭಾಗ್ಯಮ್ಮ, ಪೂರ್ಣಿಮಾ, ರೇಖಾ, ವಿದ್ಯಾಶ್ರೀ, ಶೈಲಜಾ, ರಾಜಮ್ಮ ಇದ್ದರು.