ಪಾಂಡವಪುರ ತಾಲೂಕಿನ ಎಸ್‌ಟಿಜಿ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಮ್ಯಾರಥಾನ್ ಓಟಕ್ಕೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಚಾಲನೆ ನೀಡಿದರು.
- ಎಸ್‌ಟಿಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಿ.ಎಸ್.ಪುಟ್ಟರಾಜು ಸಲಹೆ
ಪಾಂಡವಪುರ: ನಮ್ಮ ಪಾಲಕರ ಸ್ಮರಣಾರ್ಥಿವಾಗಿ ಎಸ್‌ಟಿಜಿ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಮಾನ್ಸೂನ್ ಮ್ಯಾರಥಾನ್ ಓಟದ ಸ್ಪರ್ಧೆ ಆಯೋಜನೆ ಮಾಡಲಾಗುತ್ತಿದ್ದು, ಅದೇ ರೀತಿ ಪ್ರತಿ ವಿದ್ಯಾರ್ಥಿ ತಮ್ಮ ಪಾಲಕರನ್ನು ನೆನೆಯಬೇಕು ಎಂದು ಸಂಸ್ಥೆ ಅಧ್ಯಕ್ಷ ಸಿ.ಎಸ್.ಪುಟ್ಟರಾಜು ಸಲಹೆ ನೀಡಿದರು.
ತಾಲೂಕಿನ ಚಿನಕುರಳಿ ಗ್ರಾಮದ ಎಸ್‌ಟಿಜಿ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಮಾನ್ಸೂನ್ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂತಹ ಕಾರ್ಯ ನಿರಂತರವಾಗಿರಬೇಕು ಎಂದರು.
ಸ್ಪರ್ಧೆಯಲ್ಲಿ ಶಾಲೆಯ 5 ರಿಂದ 10ನೇ ತರಗತಿಯ ಸುಮಾರು 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾಲೆ ಆವರಣದಿಂದ ಹೊರಟ ಮ್ಯಾರಥಾನ್ ಚಿನಕುರಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತ್ತೆ ಶಾಲೆಗೆ ಆಗಮಿಸಿತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ದಾರಿಯುದ್ದಕ್ಕೂ ಅಲ್ಲಲ್ಲಿ ತಂಪು ಪಾನೀಯ ವಿತರಣೆ ಮಾಡಲಾಯಿತು. ಮಕ್ಕಳ ಭದ್ರತೆ ದೃಷ್ಟಿಯಿಂದ ಅಲ್ಲಲ್ಲಿ ಪೊಲೀಸರು, ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು.
ವಿಜೇತರಾದ ಬಾಲಕ -ಬಾಲಕಿಯರಿಗೆ ಪ್ರತ್ಯೇಕವಾಗಿ ಬಹುಮಾನ ಹಾಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೂ ಸಮಾಧಾನಕರ ಬಹುಮಾನ ವಿತರಣೆ ಮಾಡಲಾಯಿತು. ಶಾಲೆ ಪ್ರಾಂಶುಪಾಲೆ ಮಾಚಮ್ಮ, ಆಡಳಿತಾಧಿಕಾರಿ ನಿವೇದಿತಾ ನಾಗೇಶ್, ಉಪ ಪ್ರಾಂಶುಪಾಲ ಲಿಂಗರಾಜು ಇತರರಿದ್ದರು.