ಜೆ.ಜೆ.ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು 
ಮಂಡ್ಯ

ಸಹಪಠ್ಯ ಚಟುವಟಿಕೆಗಳಲ್ಲೂ ಮಕ್ಕಳು ತೊಡಗಿಕೊಳ್ಳಲಿ

ಪ್ರಮುಖ ಮುಖ್ಯಾಂಶಗಳು

  • ‘ಟೈಮ್ ಮತ್ತು ಟ್ರ್ಯಾಕ್’ ಎರಡು ಮುಖ್ಯ
  • ಪಿಎಸ್‌ಐ ಲೋಕೇಶ್
  • ಶಾಲಾ ವಾರ್ಷಿಕೋತ್ಸವ
ಹಲಗೂರು: ವಿದ್ಯಾರ್ಥಿ ಜೀವನದಲ್ಲಿ ‘ಟೈಮ್ ಮತ್ತು ಟ್ರ್ಯಾಕ್’ ಎರಡು ಮುಖ್ಯವಾಗಿದ್ದು, ಒಂದು ಬಾರಿ ಟ್ರಾೃಕ್ ತಪ್ಪಿದರೆ ಮತ್ತೆ ಟ್ರಾೃಕ್‌ಗೆ ಮರಳುವುದು ಕಷ್ಟ. ಹಾಗಾಗಿ ವಿದ್ಯಾರ್ಥಿಗಳು ಪದವಿ ಶಿಕ್ಷಣ ಪಡೆಯುವವರೆಗೂ ಟ್ರಾೃಕ್ ತಪ್ಪದಂತೆ ಎಚ್ಚರ ವಹಿಸಬೇಕು ಎಂದು ಪಿಎಸ್‌ಐ ಲೋಕೇಶ್ ಸಲಹೆ ನೀಡಿದರು.
ವಳ್ಳಳ್ಳಿ ಎಜುಕೇಷನ್ ಟ್ರಸ್ಟ್ ವತಿಯಿಂದ ಜೆ.ಜೆ.ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಮತ್ತು ಜೆ.ಜೆ.ಪ್ರಜ್ವಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಸಹಪಠ್ಯ ಚಟುವಟಿಕೆ ಕಲಿತು ಇಂತಹ ಸಾಂಸ್ಕೃತಿಕ ಕಲೆಗಳಲ್ಲಿ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರದರ್ಶಿಸಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣ ಹೆಚ್ಚುತ್ತಿದ್ದು, ಈ ಬಗ್ಗೆ ಅರಿವು ಹೊಂದುವ ಮೂಲಕ ವಿದ್ಯಾರ್ಥಿಗಳು ಉತ್ತಮ ದಾರಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆ ಮೂಲಕ ಪಾಲಕರು, ಸಮಾಜಕ್ಕೆ ಒಳ್ಳೆಯ ಹೆಸರು ತರುವಂತಾಗಬೇಕು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಎಂ.ಕೆ.ಶ್ರೀನಿವಾಸ್ ಮಾತನಾಡಿ, ಶಾಲೆ ಶೈಕ್ಷಣಿಕವಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಹಿಂದಿನ ವರ್ಷ ಶಾಲೆಯ ಫಲಿತಾಂಶ ಅತ್ಯುತ್ತಮವಾಗಿದ್ದು, ಮುಂದಿನ ವರ್ಷವೂ ಇಂತಹ ಒಳ್ಳೆಯ ಉತ್ತಮ ಫಲಿತಾಂಶವನ್ನೇ ಪಡೆಯಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಳ್ಳಳ್ಳಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಕೆ.ಜೆ.ಸೋಮಶೇಖರ್ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬುದು ನಮ್ಮ ಸಂಸ್ಥೆಯ ಧ್ಯೇಯ. ಶಿಕ್ಷಕರ ಪ್ರಾಮಾಣಿಕ ಪ್ರಯತ್ನದ ಪ್ರತಿಫಲವಾಗಿ ವಿದ್ಯಾರ್ಥಿಗಳು ನಗರ ಮಕ್ಕಳಿಗೂ ಪೈಪೋಟಿ ನೀಡುತ್ತಿರುವುದು ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಳೆದ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸ್ಥಾನ ಪಡೆದ ಅನುಶ್ರೀ, ಮೇಘನಾ, ಪುಣ್ಯಶ್ರೀ ಅವರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉದ್ಯಮಿ ಎಚ್.ಎಂ.ಆನಂದ್‌ಕುಮಾರ್, ಹಲಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲ್ನಾಜ್ ಬಾನು , ಶಿಕ್ಷಕಿ ಹೇಮಾ ಅವರನ್ನು ಅಭಿನಂದಿಸಲಾಯಿತು. ಕಲೆ, ಸಂಸ್ಕೃತಿ, ಪರಿಸರ, ನಾಟಕ, ನೃತ್ಯ ವೀರಗಾಸೆ ಕುಣಿತ, ಯಕ್ಷಗಾನ ಕುಣಿತ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಮನಸೂರೆಗೊಂಡಿತು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಗುಲ್ನಾಜ್ ಭಾನು, ಪ್ರಾಂಶುಪಾಲೆ ಲಲಿತಾಂಭ ಸೋಮಶೇಖರ್, ಮುಖ್ಯ ಶಿಕ್ಷಕಿ ಶಿವಮಣಿ, ದಯಾನಂದ್, ಬಾಬು, ಜಿ.ಎಸ್.ಕೃಷ್ಣ, ಚಂದ್ರಕುಮಾರ್, ಶಿವಲಿಂಗೇಗೌಡ ಇತರರಿದ್ದರು.