ಪಾಂಡವಪುರ ತಾಲೂಕಿನ ಜಯಂತಿ ನಗರದ ಶ್ರೀಶಂಭಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ತಾಲೂಕಿನ 43 ಪ್ರೌಢಶಾಲೆಗಳ ಮೊದಲ ಮೂವರು ವಿದ್ಯಾರ್ಥಿಗಳನ್ನು ಸಂಸ್ಥೆ ವತಿಯಿಂದ ಅಭಿನಂದಿಸಲಾಯಿತು. ಪಂಚಲಿಂಗೇಗೌಡ, ಸೌಮ್ಯ್ಯಾ, ಅಕ್ಷಯ್ ಇತರರು ಇದ್ದರು. 
ಮಂಡ್ಯ

ಗ್ರಾಮೀಣ ಪ್ರದೇಶದ ಮಕ್ಕಳು ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಲಿ

ಪ್ರಮುಖ ಮುಖ್ಯಾಂಶಗಳು

  • ಶ್ರೀಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪ್ರೊ.ಎಂ.ಪಂಚಲಿಂಗೇಗೌಡ ಸಲಹೆ
  • ಎಸ್ಸೆಸ್ಸೆಲ್ಸಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಪಾಂಡವಪುರ: ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ಎಲ್ಲ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂಧಿಸಲಾಗುತ್ತಿದೆ ಎಂದು ಶ್ರೀಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪ್ರೊ.ಎಂ.ಪಂಚಲಿಂಗೇಗೌಡ ಹೇಳಿದರು.
ತಾಲೂಕಿನ ಜಯಂತಿ ನಗರದ ಶ್ರೀ ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ತಾಲೂಕಿನ ಎಲ್ಲ ಪ್ರೌಢಶಾಲೆಗಳ ಮೊದಲ ಮೂವರು ಮಕ್ಕಳಿಗೆ ‘ಪ್ರತಿಭಾ ಪುರಸ್ಕಾರ’ ವಿತರಣೆ ಮತ್ತು ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ ಎಲ್ಲ ಒಟ್ಟು 43 ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ಮೊದಲ ಮೂವರು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುವ ಮೂಲಕ ಮಕ್ಕಳಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಸಂಸ್ಥೆ ಹಲವಾರು ವರ್ಷಗಳಿಂದಲೂ ಮಾಡಿಕೊಂಡು ಬರುತ್ತಿದೆ. ಗ್ರಾಮೀಣ ಪ್ರದೇಶದ ಮಕ್ಕಳು ನಗರ ಪ್ರದೇಶದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸರಿಸಾಟಿಯಾಗಿ ನಿಲ್ಲಬೇಕು ಎಂಬ ಉದ್ದೇಶದಿಂದ ಅಧಿಕ ಅಂಕಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪಾಲಕರು ವಿದ್ಯಾರ್ಥಿಗಳ ಆಶಯಕ್ಕೆ ತಕ್ಕಂತೆ ಅನುಕೂಲ ಕಲ್ಪಿಸಿಕೊಡುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು, ಪುಸ್ತಕ ಓದುವುದು ಮಾತ್ರವಲ್ಲ ಪುಸ್ತಕ ಹೊರತಾದ ವಿಷಯಗಳ ಬಗ್ಗೆಯೂ ಆಸಕ್ತಿ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ತರಬೇತಿ ನೀಡುವ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವ ಕೆಲಸವನ್ನು ಪಾಲಕರು ಮಾಡಬೇಕು, ಶಂಭುಲಿಂಗೇಶ್ವರ ಸಂಸ್ಥೆಯೂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಎಲ್ಲ ಕೋಚಿಂಗ್ ವ್ಯವಸ್ಥೆ ಮಾಡಿಕೊಟ್ಟಿದೆ, ಜತೆಗೆ ರಾಜ್ಯಮಟ್ಟದ ಚರ್ಚಾಸ್ಪರ್ಧೆಗಳು, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ವಿಜ್ಞಾನ ಮತ್ತು ವಸ್ತು ಪ್ರದರ್ಶನ, ಡ್ರಾಯಿಂಗ್ ಸ್ಪರ್ಧೆ, ಕ್ರೀಡೆ, ರಂಗಗೀತೆ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮಕ್ಕಳನ್ನು ಉತ್ತೇಜಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಸಂಸ್ಥೆ ಅಧ್ಯಕ್ಷ ಪಿ.ಹೊನ್ನರಾಜು, ಉಪಾಧ್ಯಕ್ಷ ಬಾಲಚಂದ್ರು, ಕಾರ್ಯದರ್ಶಿ ಪಿ.ಅಕ್ಷಯ್, ಟ್ರಸ್ಟಿ ಎಸ್.ಶಂಕರ್, ಪ್ರಾಂಶುಪಾಲೆ ಸೌಮ್ಯಾ, ರಾಜು ಇತರರು ಇದ್ದರು.