ಮಂಡ್ಯದಲ್ಲಿ ಆಯೋಜಿಸಿದ್ದ ಕುಷ್ಠರೋಗದ ಕುರಿತು ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಚಾಲನೆ ನೀಡಿದರು.
- ಕುಷ್ಠರೋಗದ ಬಗ್ಗೆ ಜಾಗೃತಿ
- ಆರೋಗ್ಯ ಇಲಾಖೆ ನಗರದಲ್ಲಿ ಜಾಥಾ
- ಡಿಸಿ, ಸಿಇಒ ಸೇರಿದಂತೆ ಹಲವರು ಭಾಗಿ
ಮಂಡ್ಯ: ಕುಷ್ಠರೋಗಿಗಳನ್ನು ಸಾಮಾಜಿಕವಾಗಿ ತಾರತಮ್ಯದಿಂದ ನೋಡದೇ ಘನತೆಯಿಂದ ಕಾಣಬೇಕೆಂಬ ಅರಿವು ಮೂಡಿಸಲು ಜಾಥಾ ಆಯೋಜನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕುಷ್ಠರೋಗ ನಿರ್ಮೂಲನಾ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಚಾಲನೆ ನೀಡಿ ಮಾತನಾಡಿದ ಅವರು, ತಾರತಮ್ಯವನ್ನು ಕೊನೆಗೊಳಿಸುವುದು ಘನತೆಯನ್ನು ಕಾಪಾಡುವುದು ಎಂಬ ಘೋಷವಾಕ್ಯದಡಿ ಜಾಥಾ ನಡೆಯುತ್ತಿದೆ. ಕುಷ್ಠರೋಗದ ಗುಣ ಲಕ್ಷಣಗಳ ಹೊಂದಿರುವವರು ತಕ್ಷಣ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಮಹಾತ್ಮ ಗಾಂಧೀಜಿ ಅವರು ಕುಷ್ಠರೋಗ ನಿರ್ಮೂಲನೆಗಾಗಿ ಹೋರಾಡಿದವರು. ಅವರ ಪುಣ್ಯಸ್ಮರಣೆಯ ದಿನದಂದು ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಕುಷ್ಠರೋಗದ ಕುರಿತು ಅರಿವು ಮೂಡಿಸಲು ಜಿಲ್ಲಾ ಮಟ್ಟದ ಜಾಗೃತಿ ಜಾಥಾ ಆಯೋಜಿಸಲಾಗಿದೆ. ಇದರ ಮುಖ್ಯ ಉದ್ದೇಶ ಕುಷ್ಠರೋಗಿಗಳನ್ನು ಸಮಾಜದಲ್ಲಿ ಘನತೆಯಿಂದ ಕಾಣುವುದು ಹಾಗೂ ಗೌರವಯುತವಾಗಿ ನಡೆಸಿಕೊಳ್ಳುವುದಾಗಿದೆ. ಅದರಲ್ಲೂ ಮುಖ್ಯವಾಗಿ ಕುಟುಂಬದವರು ಕುಷ್ಠರೋಗಿಗಳನ್ನು ಉತ್ತಮವಾಗಿ ಕಂಡಾಗ ಮಾತ್ರ ಕುಷ್ಠರೋಗಿಗಳು ಮಾನಸಿಕವಾಗಿ ಕುಗ್ಗದೆ ಸಮಾಜದಲ್ಲಿ ಬದುಕಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಎಲ್ಲರಂತೆ ಕುಷ್ಠರೋಗಿಗಳಿಗೂ ಸಮಾಜದಲ್ಲಿ ಮುಕ್ತ ಅವಕಾಶ ದೊರೆಯಬೇಕು. ಅವರು ಸಹ ಸರ್ವಾಂಗೀಣ ಅಭಿವೃದ್ಧಿ ಹೊಂದಬೇಕು ಹೊಂದಬೇಕು ಎಂದು ಜಾಗೃತಿ ಜಾಥಾದ ಉದ್ದೇಶವಾಗಿದೆ. ಕುಷ್ಠರೋಗಿಗಳ ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಧೈರ್ಯ ತುಂಬುವುದು ಸಹ ಇದರ ಉದ್ದೇಶ. ಕುಷ್ಠರೋಗ ಗುಣಮುಖವಾಗುವ ಕಾಯಿಲೆ, ಅವರನ್ನು ಮುಟ್ಟುವುದರಿಂದ ಕಾಯಿಲೆ ಹರಡುವುದಿಲ್ಲ ಎಂಬುದರ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎಂ.ಎನ್.ಆಶಾಲತಾ, ಆರ್‌ಸಿಎಚ್ ಅಧಿಕಾರಿ ಡಾ.ಕೆ.ಪಿ.ಅಶ್ವಥ್, ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ಆರೋಗ್ಯ ನಿರೀಕ್ಷಣಾಧಿಕಾರಿ ವೇಣುಗೋಪಾಲ್, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಇತರರಿದ್ದರು.