ಕಿಕ್ಕೇರಿ ಹೋಬಳಿಯ ರಾಮನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಬೋನಿಗೆ ಬಿದ್ದಿರುವ ಚಿರತೆ.  
ಮಂಡ್ಯ

ರಾಮನಹಳ್ಳಿ ಬಳಿ ಬೋನಿಗೆ ಬಿದ್ದ ಚಿರತೆ

ಲೋಕೇಶ್ ಮನು. ಡಿ
ಕಿಕ್ಕೇರಿ: ಹೋಬಳಿಯ ರಾಮನಹಳ್ಳಿ ಗ್ರಾಮದ ಪುಟ್ಟರಾಜು ಜಮೀನು ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಮಂಗಳವಾರ ರಾತ್ರಿ ಸುಮಾರು 5 ವರ್ಷದ ಗಂಡು ಚಿರತೆ ಸೆರೆಯಾಗಿದೆ.
ರಾಮನಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ಚಿರತೆ ಆಗಾಗ್ಗೆ ಪ್ರತ್ಯಕ್ಷ ವಾಗುತ್ತಿತ್ತು. ರೈತರ ಜಾನುವಾರು, ಕುರಿ, ಮೇಕೆ, ಕೋಳಿ, ಸಾಕು ನಾಯಿಗಳ ಮೇಲೆ ದಾಳಿ ಮಾಡಿ ಕೊಂದು ತಿಂದುಹಾಕುತಿತ್ತು. ಚಿರತೆ ಕಾಟಕ್ಕೆ ಬೇಸತ್ತಿದ್ದ ರೈತರು ತಾಲೂಕು ವಲಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿರತೆ ಸೆರೆಗೆ ಒತ್ತಾಯಿಸಿದ್ದರು.
ಗ್ರಾಮಸ್ಥರ ಮನವಿ ಮೇರೆಗೆ ವಲಯ ಅರಣ್ಯ ಇಲಾಖೆಯವರು ರಾಮನಹಳ್ಳಿಯ ಪುಟ್ಟೇಗೌಡರ ಜಮೀನು ಬಳಿ ಚಿರತೆ ವಾರದ ಹಿಂದೆ ಬೋನು ಇರಿಸಿ, ನಾಯಿ ಕಟ್ಟಿದ್ದರು. ಮಂಗಳವಾರ ರಾತ್ರಿ ಬೋನಿನಲ್ಲಿದ್ದ ನಾಯಿ ತಿನ್ನಲು ಬಂದ ಚಿರತೆ ಸೆರೆಯಾಗಿದೆ.
ತಾಲೂಕು ವಲಯ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೋನಿನಲ್ಲಿದ್ದ ಚಿರತೆಯನ್ನು ಸುರಕ್ಷಿತವಾಗಿ ತಾಲೂಕು ಅರಣ್ಯ ಇಲಾಖೆ ಕಚೇರಿಗೆ ರವಾನಿಸಿದರು.
ಚಿರತೆ ಆರೋಗ್ಯ ತಪಾಸಣೆ ನಡೆಸಿ ಮೇಲಧಿಕಾರಿಗಳ ಆದೇಶದಂತೆ ಬಂಡೀಪುರ ಅಥವಾ ನಾಗರಹೊಳೆ ಅಭಯಾರಣ್ಯಕ್ಕೆ ಚಿರತೆ ಬಿಡಲಾಗುವುದು ಎಂದು ತಾಲೂಕು ವಲಯ ಅರಣ್ಯ ಅಧಿಕಾರಿ ಎಂ.ವಿ.ಅನಿತಾ ತಿಳಿಸಿದ್ದಾರೆ.
ಉಪವಲಯ ಅರಣ್ಯ ಅಧಿಕಾರಿ ಚೇತನ್, ಅರಣ್ಯ ಪಾಲಕಿ ರಕ್ಷಕಿ ಅಭಿ, ಸಿಬ್ಬಂದಿ ರವಿಕುಮಾರ್, ಶ್ರೀನಿವಾಸ್, ಚಿರತೆ ಕಾರ್ಯಪಡೆಯ ರಾಜೇಶ್, ಕುಮಾರ್ ಇತರರು ಈ ಸಂದರ್ಭದಲ್ಲಿದ್ದರು.