ಮದ್ದೂರು ತಾಲೂಕಿನ ಬೋರಾಪುರ ಗ್ರಾಮದಲ್ಲಿ ಚಿರತೆ ಮೇಕೆ ತಿನ್ನಲು ಬಂದು ಬೋನಿಗೆ ಸೆರೆಯಾಗಿರುವುದು.
ಮದ್ದೂರು: ತಾಲೂಕಿನ ಬೋರಾಪುರ ಗ್ರಾಮದಲ್ಲಿ ಮೇಕೆ ತಿನ್ನಲು ಬಂದ 6 ವರ್ಷ ಗಂಡು ಚಿರತೆ ಶನಿವಾರ ರಾತ್ರಿ ಬೋನಿಗೆ ಬಿದ್ದಿದೆ.
ಗ್ರಾಮದ ಪುಟ್ಟಲಿಂಗಮ್ಮ ಅವರ ತೋಟದ ಮನೆಯಲ್ಲಿ ಅರಣ್ಯಾಧಿಕಾರಿಗಳು ಒಂದು ವಾರದ ಹಿಂದೆ ಬೋನು ಇಟ್ಟಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ತಾಲೂಕು ವಲಯ ಅರಣ್ಯಾಧಿಕಾರಿ ಗವಿಯಪ್ಪ, ಉಪ ವಲಯ ಅರಣ್ಯಾಧಿಕಾರಿ ಮುರಳುನಾಯಕ್ ಹಾಗೂ ಗಸ್ತು ಪಾಲಕ ವಿರೇಶ್ ಅಂಗಡಿಯವರು ಚಿರತೆಯನ್ನು ಸುರಕ್ಷಿತವಾಗಿ ಕರೆತಂದು ಮೇಲಧಿಕಾರಿಗಳ ಆದೇಶ ಪಡೆದು ಮೀಸಲು ಅರಣ್ಯ ಪ್ರದೇಶಕ್ಕೆ ಬಿಡಲು ಕ್ರಮ ಕೈಗೊಂಡಿದ್ದಾರೆ.
ಆತಂಕದಲ್ಲಿ ಗ್ರಾಮಸ್ಥರು: ಶುಕ್ರವಾರ ರಾತ್ರಿ ದೇಶಹಳ್ಳಿ ಗ್ರಾಮದಲ್ಲಿ 2ವರ್ಷದ ಹೆಣ್ಣು ಚಿರತೆ ಸೆರೆಯಾಗಿತ್ತು. ಇದನ್ನು ಗಮನಿಸಿದರೆ ತಾಲೂಕಿನಲ್ಲಿ ಹೆಚ್ಚಿನ ಚಿರತೆಗಳಿವೆ. ಅವನ್ನು ಸೆರೆ ಹಿಡಿಯಲು ಅಧಿಕಾರಿಗಳು ಮುಂದಾಗಬೇಕು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಚಿರತೆಗಳ ಹಾವಳಿಯಿಂದ ರೈತರು ರಾತ್ರಿ ವೇಳೆ ಜಮೀನು ಮತ್ತು ಗದ್ದೆಗಳ ಬಳಿ ಹೋಗಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ ಹಾಗೂ ಕೆಲವು ಗ್ರಾಮಗಳಲ್ಲಿ ಹಗಲು ವೇಳೆಯೇ ಚಿರತೆಗಳು ಕಂಡ ಬರುತ್ತಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಅರಣ್ಯಾ ಅಧಿಕಾರಿಗಳು ಚಿರತೆಗಳನ್ನು ಹಿಡಿಯಲು ಹೆಚ್ಚಿನ ಸಂಖ್ಯೆಯಲ್ಲಿ ಬೋನುಗಳನ್ನು ಇಡಬೇಕು ಹಾಗೂ ಚಿರತೆಗಳ ಉಪಟಳವ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.