ನಾಯಕನಹಳ್ಳಿ ಗ್ರಾಮದಲ್ಲಿ ಬೋನಿಗೆ ಬಿದ್ದ ಚಿರತೆ.
ಕೆ.ಆರ್.ಪೇಟೆ: ಸಂತೇಬಾಚಹಳ್ಳಿ ಹೋಬಳಿ ಸಮೀಪದ ನಾಯಕನಹಳ್ಳಿ ಗ್ರಾಮದಲ್ಲಿ ಎಂಟು ಕುರಿಗಳನ್ನು ಕೊಂದು ಹಾಕಿದ್ದ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ.
ಭಾನುವಾರ ಗ್ರಾಮದ ಪರಮೇಶ್ ಎಂಬುವರ ಕೊಟ್ಟಿಗೆಗೆ ನುಗ್ಗಿದ ಚಿರತೆ ಎಂಟು ಕುರಿಗಳನ್ನು ಕೊಂದು ಹಾಕಿ ಐದು ಕುರಿಗಳನ್ನು ಗಂಭೀರ ಗಾಯಗೊಳಿಸಿತ್ತು. ಘಟನೆಯ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಚಿರತೆ ಸೆರೆಗೆ ಬೋನು ಅಳವಡಿಸಿದ್ದರು. ಸೋಮವಾರ ತಡರಾತ್ರಿ ಚಿರತೆ ಬೋನಿಗೆ ಸಿಲುಕಿದೆ.
ಚಿರತೆಯ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ವೈದ್ಯಕೀಯ ಪರೀಕ್ಷೆ ನಡೆಸಿ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಕಾರ್ಯಾಚರಣೆಯಲ್ಲಿ ಆರ್‌ಎಫ್‌ಒ ಅನಿತಾ, ಡಿಆರ್‌ಎಫ್‌ಒ ಚೇತನ್, ಗಸ್ತು ಅರಣ್ಯ ಪಾಲಕ ಕೌಶಿಕ್, ಅರಣ್ಯ ಇಲಾಖೆ ಸಿಬ್ಬಂದಿ ಅಭಿಲಾಷ್, ರಾಜೇಶ್, ನಿರಂಜನ್, ಬಾಬು, ರವಿಕುಮಾರ್ ಭಾಗವಹಿಸಿದ್ದರು.