ಮದ್ದೂರು ತಾಲೂಕಿನ ರಾಜೇಗೌಡನದೊಡ್ಡಿ ಸಮೀಪದ ಕೋಳಿರಾಯನಗುಡ್ಡದಲ್ಲಿ ಚಿರತೆ ಕಾಣಿಸಿಕೊಂಡಿರುವುದು. 
ಮಂಡ್ಯ

ಕೋಳಿರಾಯನಗುಡ್ಡದಲ್ಲಿ ಕಾಣಿಸಿಕೊಂಡ ಚಿರತೆ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ಗ್ರಾಮಸ್ಥರಲ್ಲಿ ಮನೆ ಮಾಡಿದ ಆತಂಕ
ಮದ್ದೂರು: ತಾಲೂಕಿನ ರಾಜೇಗೌಡನದೊಡ್ಡಿ ಸಮೀಪದ ಕೋಳಿರಾಯನಗುಡ್ಡದಲ್ಲಿ ಬುಧವಾರ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರಿಗೆ ಆತಂಕ ಹುಟ್ಟಿಸಿದೆ.
ಕೋಳಿರಾಯನಗುಡ್ಡದ ಬಳಿ ಚಿರತೆ ಇರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ಹರಿಬಿಟ್ಟಿರುವುದು ವೈರಲ್ ಆಗಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ.
ಮುಖಂಡ ಆರ್.ಬಿ.ಶಂಕರೇಗೌಡ ಮಾತನಾಡಿ, ಕೋಳಿರಾಯನಗುಡ್ಡ ಹಾಗೂ ಕೆ.ಹೊನ್ನಲಗೆರೆ ಕೆರೆ ಸಮೀಪದ 2 ಚಿರತೆಗಳಿದ್ದು, ಹಸು, ಕರು, ಕುರಿ ಹಾಗೂ ನಾಯಿಗಳನ್ನು ತಿಂದು ಹಾಕುತ್ತಿರುವುದರಿಂದ ರೈತರಿಗೆ ಆರ್ಥಿಕವಾಗಿ ನಷ್ಟವಾಗುತ್ತಿದೆ. ರೈತರು ರಾತ್ರಿ ವೇಳೆ ಜಮೀನುಗಳ ಬಳಿ ಹೋಗಿ ನೀರು ಕಟ್ಟಲು ಹಾಗೂ ಕೃಷಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಹಾಗೂ ಗ್ರಾಮಸ್ಥರು ಧೈರ್ಯವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ಚಿರತೆಗಳನ್ನು ಹಿಡಿಯಲು ಅರಣ್ಯಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕು ವಲಯ ಅರಣ್ಯಾಧಿಕಾರಿ ಗವಿಯಪ್ಪ ಮಾತನಾಡಿ, 2022ರಿಂದ ಇಲ್ಲಿಯವರೆಗೆ 16 ಚಿರತೆಗಳನ್ನು ಸೆರೆ ಹಿಡಿದು ಮೇಲಧಿಕಾರಿಗಳ ಆದೇಶ ಮೇರೆಗೆ ಕಾಡಿಗೆ ಬಿಡಲಾಗಿದೆ. ಚಿರತೆಗಳನ್ನು ಸೆರೆ ಹಿಡಿಯಲು ತಾಲೂಕಿನ ವಿವಿಧ ಭಾಗಗಳಲ್ಲಿ ಬೋನುಗಳನ್ನು ಇಡಲಾಗಿದೆ. ಇನ್ನೂ 8 ರಿಂದ 10 ಚಿರತೆಗಳು ಇರುವ ಬಗ್ಗೆ ಮಾಹಿತಿಯಿದ್ದು, ಇವುಗಳನ್ನು ಸೆರೆ ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.