ಮಂಡ್ಯ ತಾಲೂಕು ಭೂತನ ಹೊಸೂರು ಗ್ರಾಮದಲ್ಲಿ ಬೋನಿಗೆ ಬಿದ್ದ ಚಿರತೆ.  
ಮಂಡ್ಯ

ಭೂತನಹೊಸೂರಿನಲ್ಲಿ ಬೋನಿಗೆ ಬಿದ್ದ ಚಿರತೆ: ಜಮೀನಿನಲ್ಲಿ ಪತ್ತೆಯಾಗಿದ್ದ ಮೂರು‌ ಮರಿಗಳು

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಭೂತನಹೊಸೂರು ಗ್ರಾಮದಲ್ಲಿ ತಾಯಿ ಚಿರತೆ
  • ನಾಲ್ಕು ದಿನದ ಹಿಂದೆ ಮೂರು ಮರಿ ಪತ್ತೆಯಾಗಿದ್ದವು
  • ತಾಯಿ ಚಿರತೆ ಸೆರೆಗೆ ಬೋನು ಇರಿಸಿದ್ದ ಅರಣ್ಯ ಇಲಾಖೆ
ಮಂಡ್ಯ: ತಾಲೂಕಿನ ಭೂತನಹೊಸೂರು ಗ್ರಾಮದಲ್ಲಿ ತಾಯಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಗ್ರಾಮದ ಕಬ್ಬಿನ ಗದ್ದೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಮೂರು ಚಿರತೆ ಮರಿಗಳು ಪತ್ತೆಯಾಗಿದ್ದು, ಗ್ರಾಮಸ್ಥರ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರಿಗಳನ್ನು ವಶಕ್ಕೆ ಪಡೆದಿದ್ದರು.
ಆದರೆ ತಾಯಿ ಚಿರತೆ ಪತ್ತೆಯಾಗದ ಕಾರಣ ಗ್ರಾಮಸ್ಥರು, ರೈತರು ಆತಂಕಕ್ಕೆ ಒಳಗಾಗಿದ್ದರು. ಚಿರತೆ ಓಡಾಡುವ ಸ್ಥಳದಲ್ಲಿ ಬೋನು ಇಟ್ಟು ಅದನ್ನು ಸೆರೆಹಿಡಿಯುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಚಿರತೆ ಹೆಜ್ಜೆಯ ಗುರುತು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
ಹೆಜ್ಜೆಗಳನ್ನು ಪತ್ತೆ ಹೆಚ್ಚಿದ ಅಧಿಕಾರಿಗಳು ಚಿರತೆ ಓಡಾಡುತ್ತಿದ್ದ ಸ್ಥಳದಲ್ಲಿ ಬೋನನ್ನು ಇಟ್ಟಿದ್ದರು. ಅದರಂತೆ ಬೋನಿನೊಳಗೆ ಚಿರತೆ ಸೆರೆಯಾಗಿದೆ. ಗ್ರಾಮಸ್ಥರು ಚಿರತೆಯನ್ನು ಕಂಡು ಅರಣ್ಯಾಧಿಕಾರಿಗಳಿಗೆ ಸುದ್ಧಿ ಮುಟ್ಟಿಸಿದ್ದರು. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಬೋನಿನಲ್ಲಿ ಸೆರೆಯಾಗಿದ್ದ ಚಿರತೆಯನ್ನು ವಶಕ್ಕೆ ಪಡೆದು ಮೂರು ಮರಿಗಳೊಂದಿಗೆ ಅರಣ್ಯ ಇಲಾಖೆ ವಾಹನದಲ್ಲಿ ಕೊಂಡೊಯ್ದಿದ್ದಾರೆ. ಅರಣ್ಯಾಧಿಕಾರಿಗಳು ಚಿರತೆ ಮರಿ ಮತ್ತು ತಾಯಿ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ ಕಾರಣ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.