ಮಂಡ್ಯ ನಗರದ ಮಾಂಡವ್ಯ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಉಪನ್ಯಾಸ ಮಾಲಿಕೆ ಕಾರ್ಯಕ್ರಮವನ್ನು ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಉದ್ಘಾಟಿಸಿದರು.
- ನಗರದಲ್ಲಿ ಉಪನ್ಯಾಸ ಮಾಲಿಕೆ ಕಾರ್ಯಕ್ರಮ
- ಮುದ್ದು ರಾಮ ಬಳಗ ಹಾಗೂ ಮಾಂಡವ್ಯ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಆಯೋಜನೆ
ಮುದ್ದುರಾಮನ ಚೌಪದಿಗಳು ಅಂತರಂಗ ಬೆಳಗುವ ಸಂವಿಧಾನದಂತಿವೆ. ನವ ಸಮಾಜದ ನಿರ್ಮಾಣಕ್ಕೆ ಮಹನೀಯರು ಬಿಟ್ಟು ಹೋದ ಮೌಲ್ಯ ಮಾರ್ಗ ಅರಿಯಬೇಕಾದರೆ ಮುದ್ದುರಾಮನ ಕಾವ್ಯದೊಳಗೆ ಅನುಸಂಧಾನ ನಡೆಸಬೇಕಿದೆ ಎಂದು ಖ್ಯಾತ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಹೇಳಿದರು.
ನಗರದ ಹೊರವಲಯದ ಜ್ಞಾನಸಾಗರ ಕ್ಯಾಂಪಸ್‌ನಲ್ಲಿರುವ ಮಾಂಡವ್ಯ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಮುದ್ದು ರಾಮ ಬಳಗ ಹಾಗೂ ಮಾಂಡವ್ಯ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ‘ಮುದ್ದುರಾಮ-ಒಂದು ಪರಿಮಳದ ಪಯಣ’ ಉಪನ್ಯಾಸ ಮಾಲಿಕೆ -4 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮುದ್ದುರಾಮನ ಚೌಪದಿಗಳು ಮಾನವೀಯ ಮೌಲ್ಯಗಳನ್ನು ನೆನಪಿಸುವ ಜತೆಗೆ ವ್ಯಕ್ತಿಯ ಅಂತರಂಗ ಶುದ್ಧಿಗೆ ದಾರಿ ತೋರಿಸುವ ಕಾವ್ಯವಾಗಿವೆ. ಇವುಗಳು ಜನರಿಗೆ ತಲುಪಬೇಕು ಮತ್ತು ಪ್ರಸಾರ ಆಗಲು ಎಲ್ಲರೂ ಕೈಜೋಡಿಸಬೇಕು ಎಂದರು.
ಮುದ್ದುರಾಮನ ಚೌಪದಿಗಳು ಹಾಗೂ ಅದರ ಕರ್ತೃ ಕೆ.ಸಿ.ಶಿವಪ್ಪ ಅವರ ಸಾಹಿತ್ಯ ನಮ್ಮನ್ನು ಆಕರ್ಷಿಸಿದೆ. ಸಮಾಜವನ್ನು ನೈತಿಕವಾಗಿ, ಮಾನವೀಯವಾಗಿ ಬೆಳೆಸುವ ಮಹತ್ತರ ಜವಾಬ್ದಾರಿ ಸಾಹಿತ್ಯ ಹಾಗೂ ಸಾಹಿತಿಗಳ ಮೇಲಿದೆ. ಇಂತಹ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ಕೆ.ಸಿ.ಶಿವಪ್ಪ ತಮ್ಮ ಮುದ್ದುರಾಮನ ಚೌಪದಿಗಳ ಮೂಲಕ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಎಸ್.ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹಿತಿ ಕೆ.ಸಿ.ಶಿವಪ್ಪ, ವಿದುಷಿ ಶುಭಾ ರಾಘವೇಂದ್ರ, ಮುದ್ದುರಾಮ ಬಳಗ ಜಿಲ್ಲಾ ಸಂಚಾಲಕಿ ಭವಾನಿ ಲೋಕೇಶ್, ಪ್ರೊ.ನೀಲಗಿರಿ ತಳವಾರ್, ಡಾ.ಶ್ರೀನಿವಾಸ್ ಶೆಟ್ಟಿ ಇತರರಿದ್ದರು.