ಮಂಡ್ಯದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮಿಮ್ಸ್‌ನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯ ಡಾ.ಮನೋಹರ್ ಮಾತನಾಡಿದರು.  
ಮಂಡ್ಯ

ಮಹಿಳೆಯರು ಆರೋಗ್ಯ ನಿರ್ಲಕ್ಷ್ಯಿಸದಿರಲಿ: ಮಿಮ್ಸ್‌ನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯ ಡಾ.ಮನೋಹರ್ ಸಲಹೆ

ಪ್ರಮುಖ ಮುಖ್ಯಾಂಶಗಳು

  • ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂವಾದ
  • ಪರಿಸರ್ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಮಮತೆಯ ಮಡಿಲು, ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಆಯೋಜನೆ
ಮಂಡ್ಯ: ಹೆಣ್ಣು ಮಕ್ಕಳು ಇಡೀ ಕುಟುಂಬದ ಆರೋಗ್ಯ ನೋಡಿಕೊಳ್ಳುತ್ತಾರೆ. ಆದರೆ ಅವರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ ಎಂದು ಮಿಮ್ಸ್‌ನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯ ಡಾ.ಮನೋಹರ್ ಹೇಳಿದರು.
ನಗರದ ಹೊಸಹಳ್ಳಿ ಮಹಾಮಾಯ ಚೈಲ್ಡ್‌ಕೇರ್ ಆವರಣದಲ್ಲಿ ಪರಿಸರ್ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಮಮತೆಯ ಮಡಿಲು, ಪತಂಜಲಿ ಯೋಗ ಶಿಕ್ಷಣ ಸಮಿತಿ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಆರೋಗ್ಯ ಮತ್ತು ಕ್ಯಾನ್ಸರ್ ಜಾಗೃತಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಮಂಡ್ಯದಲ್ಲಿ ಹೆಚ್ಚಿನ ಕ್ಯಾನ್ಸರ್ ರೋಗ ಪತ್ತೆಯಾಗುತ್ತಿವೆ. ಇದರಲ್ಲಿ ಮೂರನೇ ಹಂತದ ಕ್ಯಾನ್ಸರ್ ರೋಗ ಪ್ರಕರಣಗಳೇ ಹೆಚ್ಚಿವೆ?. ಇದಕ್ಕೆ ಮಹಿಳೆಯರು ಆರೋಗ್ಯ ಬಗ್ಗೆೆ ವಹಿಸುವ ನಿರ್ಲಕ್ಷ್ಯವೇ ಕಾರಣ. ಕ್ಯಾನ್ಸರ್ ಎನ್ನುವುದನ್ನು ವಾಸಿ ಮಾಡದಂತಹ ರೋಗವೇನೂ ಅಲ್ಲ. ಸೂಕ್ತ ಚಿಕಿತ್ಸೆ ಪಡೆದು ರೋಗ ಗುಣ ಪಡಿಸಬಹುದು. ಇಷ್ಟಿದ್ದರೂ ಮಹಿಳೆಯರು ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಡ್ಡಾಯವಾಗಿ 40 ವರ್ಷ ಮೇಲ್ಪಟ್ಟ ಮಹಿಳೆಯರು ಗರ್ಭಕೋಶ, ಸ್ತನ ತಪಾಸಣೆ ಮಾಡಿಸಿಕೊಳ್ಳಬೇಕು. ಮಕ್ಕಳಿಗೂ ಕ್ಯಾನ್ಸರ್ ತಪಾಸಣೆಯನ್ನು ಉಚಿತವಾಗಿ ಮಾಡಿಕೊಡಲಾಗುತ್ತಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಒಟ್ಟಿನಲ್ಲಿ ಮಹಿಳೆಯರು ಆರೋಗ್ಯ ನಿರ್ಲಕ್ಷ್ಯ ಮಾಡದೇ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಕಡೆ ಗಮನ ಹರಿಸಬೇಕು ಎಂದು ಹೇಳಿದರು.
ಸದ್ವಿದ್ಯಾ ವಿದ್ಯಾಸಂಸ್ಥೆ ಕಾರ್ಯದರ್ಶಿ ರತ್ನಮ್ಮ ಮಾತನಾಡಿ, ಸ್ವತಃ ನಾವು ವಿದ್ಯಾವಂತರಾಗಿದ್ದರೂ ಇಂತಹ ಕಾರ್ಯಕ್ರಮಕ್ಕೆ ಒತ್ತು ನೀಡಬೇಕು. ಕ್ಯಾನ್ಸರ್ ರೋಗಿಗಳಿಗೆ ಅವರ ಕುಟುಂಬದವರೂ ಹಣ ಖರ್ಚು ಮಾಡಿ ಚಿಕಿತ್ಸೆ ಕೊಡಿಸಲು ಶಕ್ತರಾಗಿರುತ್ತಾರೆ. ಆದರೆ ರೋಗಿಗಳಿಗೆ ಆತ್ಮಸ್ಥೈರ್ಯ ಕಳೆದುಕೊಂಡರೆ ಅಮೂಲ್ಯ ಪ್ರಾಣವೇ ಹೋಗುತ್ತದೆ. ಹಾಗಾಗಿ ಧೈರ್ಯವಾಗಿ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡುವ ಮನೋಭಾವ ಇರಬೇಕು ಎಂದು ಸಲಹೆ ನೀಡಿದರು.
ಪರಿಸರ ಸಂಸ್ಥೆ ಕಾರ್ಯದರ್ಶಿ ಕೆ.ಪಿ.ಅರುಣಕುಮಾರಿ ಮಾತನಾಡಿ, ಹೆಣ್ಣುಮಕ್ಕಳು ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು. ಪೌಷ್ಟಿಕ ಆಹಾರ ಹಾಗೂ ನಿರಂತರ ಯೋಗ, ಧ್ಯಾನದ ಕಡೆ ಗಮನ ಹರಿಸಬೇಕು. ಮನರಂಜನೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಮಾನಸಿಕ, ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪತಂಜಲಿ ಯೋಗ ಶಿಕ್ಷಣ ಸಮಿತಿ ಜಿಲ್ಲಾ ಸಂಯೋಜಕ ರವಿ, ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್, ಮಹಾಮಾಯ ಚೈಲ್ಡ್ ಕೇರ್ ಮುಖ್ಯಸ್ಥ ಗೀತಾ ಕಾಮತ್, ಯೋಗ ಶಿಕ್ಷಕ ಬಾಲು ಭಾಗವಹಿಸಿದ್ದರು.