ಪಾಂಡವಪುರ ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಉದ್ಘಾಟಿಸಿದರು.
ಪಾಂಡವಪುರ: ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಭಾರತೀಯರಾದ ನಾವೆಲ್ಲರು ಜಾತಿ-ಭೇದ, ಮತ-ಪಂಥವನ್ನು ಬಿಟ್ಟು ಸಮಾನತೆಯಿಂದ ಬದುಕುವುದನ್ನು ಕಲಿಯಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಾಜದಲ್ಲಿನ ಅಸ್ಪಶ್ಯತೆ, ಜಾತಿ ವ್ಯವಸ್ಥೆ ತೊಲಗಿಸಿ ಸಾಮಾಜಿಕ ನ್ಯಾಯ, ಸಮಾನತೆ, ಶಿಕ್ಷಣವನ್ನು ತಂದುಕೊಡಲು ಸಾಕಷ್ಟು ಹೋರಾಟ ನಡೆಸಿದರು. ಸಂವಿಧಾನದ ಮೂಲಕ ಅವಕಾಶಗಳನ್ನು ಕಲ್ಪಿಸಿಕೊಟ್ಟರು. ಆದರೂ ಸಮಾಜದಲ್ಲಿ ಅಸ್ಪಶ್ಯತೆ, ಜಾತಿ ವ್ಯವಸ್ಥೆ, ಕೀಳರಿಮೆ ನಾಶವಾಗಿಲ್ಲ. ಹಿಂದಿನಿಂದಲೂ ಸಮಾಜದಲ್ಲಿನ ಕೆಲವು ಮೇಲ್ವರ್ಗದವರು, ನಮ್ಮಂತಹ ರಾಜಕಾರಣಿಗಳು ಸಮಾಜವನ್ನು ಒಡೆದು ಆಳುವ ಸಂಸ್ಕೃತಿಯನ್ನು ರೂಢಿಸಿಕೊಂಡು ಬಂದಿದ್ದಾರೆ. ಇವುಗಳನ್ನು ನಾವು ಅರ್ಥ ಮಾಡಿಕೊಂಡು ತಿರಸ್ಕೃರಿಸಿ ಎಲ್ಲರೂ ಒಂದಾಗಿ ಬಾಳುವುದನ್ನು ಕಲಿಯಬೇಕು. ಯಾವುದೇ ವೃತ್ತಿಯನ್ನು ಕೀಳಾಗಿ ಕಾಣದೆ ಎಲ್ಲರನ್ನು ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನತೆಯಿಂದ ಬದುಕು ನಡೆಸುವುದನ್ನು ಕಲಿಯಬೇಕು ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಶ್ರೀನಿವಾಸ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವಮಾನ್ಯತೆ ಪಡೆದು ಶ್ರೇಷ್ಠ ನಾಯಕ, ಜಾತ್ಯಾತೀತ ರಾಷ್ಟ್ರ, ಸಮಸಮಾಜ ನಿರ್ಮಾಣ ಹಾಗೂ ವ್ಯಕಿ ್ತಗೌರವವನ್ನು ಎತ್ತಿ ಹಿಡಿದ ಮಹಾನ್ ನಾಯಕ ಎಂದು ಬಣ್ಣಿಸಿದರು.
ಸಮಾಜದಲ್ಲಿ ಹಣ, ಹೆಂಡವಿಲ್ಲದೆ ಚುನಾವಣೆ ನಡೆಸಲು ಸಾಧ್ಯವಾಗುತ್ತಿಲ್ಲ. ದುಬಾರಿ ಶಿಕ್ಷಣ, ಆರೋಗ್ಯದಿಂದ ಜನರು ಬಡತನಕ್ಕೆ ಒಳಗಾಗುತ್ತಿದ್ದಾರೆ. ಸಮಾಜದಲ್ಲಿ ಇನ್ನೂ ಅಸಮಾನತೆ, ಅಸ್ಪಶ್ಯತೆ, ಜಾತಿ ವ್ಯವಸ್ಥೆ ತಾಂಡವಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಜಯ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ.ಎಸ್.ಕೆ.ಲೀಲಾ ಉಪನ್ಯಾಸ ನೀಡಿದರು. ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ತಾಪಂ ಇಒ ವೀಣಾ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ್, ಸಹಾಯಕ ನಿರ್ದೇಶಕಿ ಕೋಮಲಾ, ಟಿಎಚ್‌ಒ ಡಾ.ಸಿ.ಎ.ಅರವಿಂದ್, ಪುರಸಭೆ ಮುಖ್ಯಾಧಿಕಾರಿ ಸತೀಶ್ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.