ಮಂಡ್ಯ ತಾಲೂಕು ತಂಗಳಗೆರೆ ಗ್ರಾಮದಲ್ಲಿ ಆಶ್ರಯ ಯೋಜನೆಯಡಿ ಬಡಾವಣೆ ಅಭಿವೃದ್ಧಿ ಕಾಮಗಾರಿ ಕಾರ್ಯಕ್ರಮದಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ಅವರನ್ನು ಅಭಿನಂದಿಸಲಾಯಿತು. 
ಮಂಡ್ಯ

ಬಡವರಿಗೆ ‘ರವಿಗೂಡಿ’ನಲ್ಲಿ ಸೂರು: ತಂಗಳಗೆರೆಯಲ್ಲಿ 80 ಜನರಿಗೆ ನಿವೇಶನ ಹಂಚಿಕೆ

ಪ್ರಮುಖ ಮುಖ್ಯಾಂಶಗಳು

  • ನಿವೇಶನಕ್ಕಾಗಿ 24 ವರ್ಷದ ಹೋರಾಟ
  • ತಂಗಳಗೆರೆಯಲ್ಲಿ ಆಶ್ರಯ ಬಡಾವಣೆ ನಿರ್ಮಾಣ
  • ಕಾಮಗಾರಿಗೆ ಶಾಸಕ ರವಿಕುಮಾರ್ ಚಾಲನೆ
ಮಂಡ್ಯ: ಬರೋಬರಿ 24 ವರ್ಷದಿಂದ ನಿವೇಶನಕ್ಕಾಗಿ ಹೋರಾಟ ನಡೆಸುತ್ತಿದ್ದವರಿಗೆ ಕೊನೆಗೂ ಸೂರು ಸಿಕ್ಕಿದೆ. ಇದಕ್ಕೆ ಶಾಸಕ ಪಿ.ರವಿಕುಮಾರ್ ಗಣಿಗ ಬೆಂಬಲವಾಗಿ ನಿಂತ ಹಿನ್ನೆಲೆಯಲ್ಲಿ ಕೃತಜ್ಞತೆಗಾಗಿ ಬಡಾವಣೆಗೆ ‘ರವಿಗೂಡು’ ಎಂದು ಹೆಸರಿಡಲಾಗಿದೆ.
ತಾಲೂಕಿನ ಹಲ್ಲೇಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನರಹಿತರು ತಮಗೊಂದು ಸೂರು ನೀಡುವಂತೆ ಎರಡು ದಶಕಕ್ಕೂ ಹೆಚ್ಚು ಮನವಿ ಸಲ್ಲಿಸುತ್ತಲೇ ಬಂದಿದ್ದರು. ಇದಕ್ಕೆ ಸ್ಪಂದಿಸಿದ ಶಾಸಕ ರವಿಕುಮಾರ್ ಗಣಿಗ ಅವರು ತಂಗಳಗೆರೆ ಗ್ರಾಮದಲ್ಲಿ ನಾಲ್ಕು ಎಕರೆ ಮೂವತ್ತೈದು ಗುಂಟೆ ಸರ್ಕಾರಿ ಜಮೀನು ಗುರುತಿಸಿ 120 ನಿವೇಶನ ವಿಭಾಗದ ಮಾಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಶ್ರಯ ಯೋಜನೆಯಡಿ ಬಡವರಿಗೆ ನೀಡಿದರು.
ತಂಗಳಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಶ್ರಯ ಯೋಜನೆಯಡಿ ನಿರ್ಮಾಣ ಮಾಡುತ್ತಿರುವ ಲೇಔಟ್‌ಗೆ ಶಾಸಕ ರವಿಕುಮಾರ್ ಗಣಿಗ ಭೂಮಿ ಪೂಜೆ ನೆರವೇರಿಸಿದರು. ಸಧ್ಯಕ್ಕೆ 80 ಜನರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. 20 ಜನರು ಈಗಷ್ಟೇ ದಾಖಲಾತಿ ಸಲ್ಲಿಕೆ ಮಾಡಿದ್ದಾರೆ. ಉಳಿದ 20 ಜನರು ಕೂಡ ಸಾಧ್ಯವಾದಷ್ಟು ತ್ವರಿತವಾಗಿ ದಾಖಲೆ ಹಸ್ತಾಂತರ ಮಾಡಿದರೆ ಎಲ್ಲರಿಗೂ ಒಂದು ತಿಂಗಳೊಳಗೆ ಹಕ್ಕುಪತ್ರ ನೀಡುವುದಾಗಿ ಶಾಸಕ ರವಿಕುಮಾರ್ ಗಣಿಗ ಘೋಷಣೆ ಮಾಡಿದರು. ಹಲವು ವರ್ಷದ ಹೋರಾಟದ ಬಳಿಕ ಸೂರು ಸಿಕ್ಕ ಖುಷಿ ಫಲಾನುಭವಿಗಳ ಮುಖದಲ್ಲಿ ಕಂಡುಬಂತು. ಇನ್ನು ಲೇಔಟ್ ನಿರ್ಮಾಣಕ್ಕೆಂದು 50 ಲಕ್ಷ ರೂ. ಅನುದಾನ ಘೋಷಣೆ ಮಾಡಿದ ರವಿಕುಮಾರ್ ಗಣಿಗ, ಇದನ್ನು ರಾಜ್ಯದಲ್ಲಿಯೇ ಮಾದರಿ ಬಡಾವಣೆಯನ್ನಾಗಿ ರೂಪಿಸಲಾಗುವುದು ಎಂದರು.
ತಹಸೀಲ್ದಾರ್ ವಿಶ್ವನಾಥ್, ತಾಪಂ ಇಒ ಲೋಕೇಶ್‌ಮೂರ್ತಿ, ಹಲ್ಲೇಗೆರೆ ಗ್ರಾಪಂ ಅಧ್ಯಕ್ಷೆ ಪ್ರೇಮಮ್ಮ, ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಆರ್.ಗೀತಾ, ಕರೀಗೌಡ, ವಿನೋದ್, ಅಶೋಕ್, ವೈಶಾಲಿ, ಎಚ್.ಎಂ.ರಮೇಶ್, ಟಿ.ಲೋಕೇಶ್, ತಾಯಮ್ಮ, ರಾಮಲಿಂಗೇಗೌಡ, ಮಾಲಾಶ್ರೀ , ನಿಂಗರಾಜು, ದಯಾನಂದ್, ಸುಧಾಮಣಿ, ಸಿ.ಎಂ.ದ್ಯಾವಪ್ಪ ಇತರರಿದ್ದರು.
ಇದಕ್ಕೂ ಮುನ್ನ ಹಲ್ಲೇಗೆರೆ ಗ್ರಾಮದಿಂದ ತಂಗಳಗೆರೆವರೆಗೆ ನೂರಾರು ಬೈಕ್ ರ‌್ಯಾಲಿ ಮೂಲಕ ಶಾಸಕ ರವಿಕುಮಾರ್ ಗಣಿಗ, ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮಾಜಿ ಸದಸ್ಯ ಚಿಕ್ಕಬಳ್ಳಿ ಕೃಷ್ಣ ಸೇರಿದಂತೆ ಹಲವು ಮುಖಂಡರನ್ನು ಕರೆದುಕೊಂಡು ಬರಲಾಯಿತು. ಹಲ್ಲೇಗೆರೆ ಗ್ರಾಮದಲ್ಲಿ ಶಾಸಕರಿಗೆ ಅಭೂತಪೂರ್ವ ಸ್ವಾಗತ ನೀಡಿದ ಗ್ರಾಮಸ್ಥರು, ಬೃಹತ್ ಮೂಸಂಬಿ ಹಾರವನ್ನು ಹಾಕಿ ಜೈಕಾರ ಕೂಗಲಾಯಿತು.

ಒತ್ತುವರಿ ತೆರವು ಖಚಿತವೆಂದ ಶಾಸಕ

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಡವರಿಗೆ ನಿವೇಶನ ಕಲ್ಪಿಸಿಕೊಡುವ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗಕ್ಕಾಗಿ ಹುಡುಕಾಟ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಯಾರಾದರೂ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರೆ ತೆರವುಗೊಳಿಸಿ ಬಡವರಿಗೆ ನಿವೇಶನ ನೀಡುವುದು ಖಚಿತ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.
ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮನೆ ಇಲ್ಲದವರಿಗೆ ಆ ಸೌಲಭ್ಯ ಕಲ್ಪಿಸುವುದು ನಮ್ಮ ಕರ್ತವ್ಯ. ಅಂತೆಯೇ ನಮ್ಮ ಸರ್ಕಾರದ ಧ್ಯೇಯ. ಹಲ್ಲೇಗೆರೆ ಗ್ರಾಪಂ ವ್ಯಾಪ್ತಿಯ ಫಲಾನುಭವಿಗಳಿಗೆ 24 ವರ್ಷದ ನಂತರ ನಿವೇಶನ ಸಿಕ್ಕಿದೆ. ಸರ್ಕಾರಿ ಜಾಗ ಹುಡುಕುವುದು ಹಾಗೂ ಅರ್ಹರಿಗೆ ಕೊಡುವುದು ಸವಾಲಿನ ಕೆಲಸ. ಕಾರಣ ಸರ್ಕಾರಿ ಜಾಗ ಹುಡುಕಲು ಹೊರಟರೆ ಹಲವು ಸಮಸ್ಯೆ ಎದುರಾಗುತ್ತದೆ. ಕೆಲವರಿಗೆ ಮಂಜೂರಾಗಿರುವ ಜಾಗಕ್ಕೂ ಹೆಚ್ಚು ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿರುತ್ತಾರೆ. ಅದು ತಮ್ಮದೇ ಜಾಗವೆಂದು ಹೇಳುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಒತ್ತುವರಿ ಮಾಡಿಕೊಂಡಿರುವ ಜಾಗ ಬಿಡುವುದಿಲ್ಲ. ಅದೇ ರೀತಿ ಈ ವಿಚಾರದಲ್ಲಿ ಬೆದರುವ ವ್ಯಕ್ತಿ ನಾನಲ್ಲ ಎಂದರು.
ತಂಗಳಗೆರೆಯಲ್ಲಿ 120 ಜನರಿಗೆ ಹಾಗೂ ಬೂದನೂರಿನಲ್ಲಿ 120 ಜನರಿಗೆ ನಿವೇಶನ ನೀಡಲಾಗಿದೆ. ಬೂದನೂರಿನಲ್ಲಿ ಇನ್ನೂ 50 ಜನರಿಗೆ ಹಕ್ಕುಪತ್ರವನ್ನು ಶೀಘ್ರವೇ ನೀಡಲಾಗುವುದು. ಮಂಡ್ಯ ವಿಧಾನಸಭಾ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲೂ ಅರ್ಹರಿಗೆ ನಿವೇಶನ ಕೊಡಲಾಗುವುದು. ಹುಲಿವಾನದಲ್ಲಿ 550 ನಿವೇಶನ, ಬಸರಾಳು ಹಾಗೂ ಉಪ್ಪರಕನಹಳ್ಳಿಯಲ್ಲಿ ತಲಾ ಎರಡು ಎಕರೆ, ಚಂದಗಾಲಿನಲ್ಲಿ ಏಳು ಎಕರೆ, ಕೆರಗೋಡಿನಲ್ಲಿ 30 ನಿವೇಶನ ನೀಡಲಾಗುವುದು. ಹಲ್ಲೇಗೆರೆ ಗ್ರಾಪಂ ವ್ಯಾಪ್ತಿಯ ಫಲಾನುಭವಿಗಳಿಗೆ ನಿವೇಶನ ನೀಡಲು ತಂದನಾಯ್ಕನದೊಡ್ಡಿ ಸಮೀಪ ಹತ್ತು ಎಕರೆ ಗುರುತಿಸಲಾಗಿದ್ದು, 500 ಜನರಿಗೆ ಎರಡು ತಿಂಗಳಲ್ಲಿ ನಿವೇಶನ ನೀಡಲಾಗುವುದು ಎಂದು ವಿವರಿಸಿದರು.
ಮುದ್ದನಘಟ್ಟ ಗ್ರಾಮದ ಸಮೀಪ 80 ಎಕರೆ ಜಾಗವನ್ನು ಕೈಗಾರಿಕೆಗೆಂದು ಗುರುತಿಸಲಾಗಿದೆ. ಅಲ್ಲಿ ಗಾರ್ಮೆಂಟ್ಸ್ ಪ್ರಾರಂಭಿಸಿ ಯುವಕರು ಹಾಗೂ ಮಹಿಳೆಯರಿಗೆ ಉದ್ಯೋಗ ನೀಡಲಾಗುವುದು. ಹಲ್ಲೇಗೆರೆ ಗ್ರಾಪಂ ವ್ಯಾಪ್ತಿಯಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. 100 ಕೋಟಿ ರೂ. ವೆಚ್ಚದಲ್ಲಿ ನಾಲೆಗಳ ಆಧುನೀಕರಣ ನಡೆಯುತ್ತಿದೆ. ಬಸರಾಳು ಭಾಗಕ್ಕೆ ನೀರೊದಗಿಸಲು ಶ್ರೀರಂಗಪಟ್ಟಣದಿಂದ ಕಾವೇರಿ ನೀರು ಪೂರೈಕೆಗೆ 1000 ಕೋಟಿ ರೂ. ಹಾಗೂ ಹೇಮಾವತಿಯಿಂದ ನೀರು ಸರಬರಾಜು ಮಾಡಲು 350 ಕೋಟಿ ರೂ. ವೆಚ್ಚದ ಕಾಮಗಾರಿ ಡಿಪಿಆರ್ ಸಿದ್ಧವಾಗಿದೆ. ಇಷ್ಟೆಲ್ಲ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದರೂ ಕೆಲವರು ಲೆಕ್ಕ ಕೇಳುತ್ತಿದ್ದಾರೆ, ಅದನ್ನುಕೊಡುತ್ತೇವೆ ಎಂದು ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದರು.

ಬಾಕ್ಸ್
ವಿರೋಧಿಗಳಿಂದಲೂ ಹೊಗಳಿಕೆ
ಮಂಡ್ಯ ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಮಾತನಾಡಿ, ಹಲ್ಲೇಗೆರೆ ಗ್ರಾಪಂ ವ್ಯಾಪ್ತಿಯ ಫಲಾನುಭವಿಗಳಿಗೆ ನಿವೇಶನ ಕೊಡಿಸಲು ಶಾಸಕ ರವಿಕುಮಾರ್ ಅವರು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರೊಂದಿಗೆ ಹಲವು ಬಾರಿ ಸಭೆ ಮಾಡಿದ್ದಾರೆ. ಇಲ್ಲಿ ಫಲಾನುಭವಿ ಆಯ್ಕೆ ವಿಚಾರದಲ್ಲೂ ಪಾರದರ್ಶಕತೆ ಕಾಪಾಡಿಕೊಳ್ಳಲಾಗಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯದಿರುವ ಗ್ರಾಮವಿಲ್ಲ. ಅಷ್ಟರಮಟ್ಟಿಗೆ ಶಾಸಕರು ಕೆಲಸ ಮಾಡುತ್ತಿದ್ದಾರೆ. ಹಿಂದೆ ಇಂದಿರಾಗಾಂಧಿ ಹೆಸರಲ್ಲಿ ಬಡಾವಣೆ ಆಗುತ್ತಿದ್ದವು, ಈಗ ರವಿಕುಮಾರ್ ಗಣಿಗ ಅವರ ಹೆಸರಲ್ಲಿ ಲೇಔಟ್ ಆಗುತ್ತಿವೆ. ಇದು ಜನರು ಅವರ ಮೇಲೆ ಇಟ್ಟಿರುವ ಪ್ರೀತಿಗೆ ಸಾಕ್ಷಿ ಎಂದರು.