ಮಂಡ್ಯ ನಗರದ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ತೆರೆಯಲಾಗಿದ್ದ ಮಳಿಗೆಯಲ್ಲಿ ಉತ್ಪನ್ನಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವೀಕ್ಷಿಸಿದರು.
- ಎನ್‌ಆರ್‌ಎಲ್‌ಎಂ ಕಾರ್ಯಕ್ಕೆ ಸಚಿವ ಎನ್.ಚಲುವರಾಯಸ್ವಾಮಿ ಮೆಚ್ಚುಗೆ
ಎನ್‌ಆರ್‌ಎಲ್‌ಎಂ(ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ) ಸ್ವ ಸಹಾಯ ಮಹಿಳಾ ಒಕ್ಕೂಟದಿಂದ ಸಿದ್ಧಪಡಿಸುತ್ತಿರುವ ವಿವಿಧ ಉತ್ಪನ್ನಗಳಿಗೆ ಹೊಸ ರೂಪ ಕೊಡಲಾಗಿದೆ. ಅದರಂತೆ ಹಿಂದಿನಂತೆಯೇ ಅಕ್ಕ ಬ್ರ್ಯಾಂಡ್ ಹೆಸರಲ್ಲಿ ನಗರದಲ್ಲಿ ಬಿಡುಗಡೆ ಮಾಡಲಾಯಿತು.
80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 80 ವಿವಿಧ ಉತ್ಪನ್ನಗಳನ್ನು ಸಿದ್ಧಪಡಿಸಲಾಗಿತ್ತು. ಅಂತೆಯೇ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರತ್ಯೇಕ ಸ್ಥಳ ತೆರೆದು ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ನಡೆಯಿತು. ಮಳಿಗೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿವಿಧ ಉತ್ಪನ್ನಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಆಸಕ್ತ ಮಹಿಳೆಯರನ್ನು ಒಗ್ಗೂಡಿಸಿ ಸ್ವಸಹಾಯ ಗುಂಪುಗಳಾಗಿ ರಚಿಸಿ ನಂತರ ಅವರಿಗೆ ವಿಶೇಷ ತರಬೇತಿ, ಉತ್ಪನ್ನಗಳ ತಯಾರಿಕೆ ಜತೆಗೆ ಅವುಗಳ ಮಾರಾಟಕ್ಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ. ಪರಿಣಾಮ ಬೆರಳೆಣಿಕೆಯಷ್ಟಿದ್ದ ಮಹಿಳಾ ಸದಸ್ಯರ ಸಂಖ್ಯೆ ಲಕ್ಷ ದಾಟಿದೆ. ಮಾತ್ರವಲ್ಲದೆ ಉತ್ಪನ್ನಗಳ ಸಂಖ್ಯೆಯೂ 150ಕ್ಕೂ ಹೆಚ್ಚಿದೆ. ಆದರೆ ಬ್ರ್ಯಾಂಡಿಂಗ್, ಮಾರುಕಟ್ಟೆಯ ಸಮಸ್ಯೆ ಇದೆ. ಈ ಹಿನ್ನೆಲೆಯಲ್ಲಿ ಅಕ್ಕ ಬ್ರ್ಯಾಂಡ್ಉ ತ್ಪನ್ನಗಳಿಗೆ ಹೊಸ ರೂಪ ಕೊಡಲಾಗಿದೆ. ಅಂದರೆ ಹೊಸ ಲೇಬಲ್ ಜತೆಗೆ ಜನರನ್ನು ಆಕರ್ಷಿಸಲು ಆದ್ಯತೆ ನೀಡಲಾಗಿದೆ. ಇದಕ್ಕಾಗಿ ಕಳೆದ ಕೆಲ ದಿನದಿಂದ ಶ್ರಮಿಸಲಾಗಿದೆ.
ಬೆರಳೆಣಿಕೆಯಷ್ಟು ಸಂಖ್ಯೆಯಿಂದ ಪ್ರಾರಂಭವಾದ ಕಾರ್ಯಕ್ರಮದಲ್ಲಿಂದು ಬರೋಬರಿ 1,29,788 ಮಹಿಳಾ ಸದಸ್ಯರಿದ್ದಾರೆ. ಜಿಲ್ಲೆಯಲ್ಲಿ 12,549 ಸ್ವಸಹಾಯ ಗುಂಪುಗಳನ್ನು ರಚನೆ ಮಾಡಲಾಗಿದೆ. ಅಂತೆಯೇ ಹಲವು ಕಾರ್ಯಕ್ರಮ, ಸಂತೆ ಸೇರಿದಂತೆ ಹಲವೆಡೆ ತಿಂಡಿ ತಿನಿಸು ಮಾರಾಟ ಮಾಡಲಾಗುತ್ತಿದೆ. ಪರಿಣಾಮ ಕೋಟ್ಯಂತರ ರೂ ವಹಿವಾಟು ನಡೆಯುತ್ತಿದೆ. ವಿಶೇಷವೆಂದರೆ ಜಿಲ್ಲೆಯಲ್ಲಿ ಹಲವು ವೃದ್ಧೆಯರು ಇದರ ಭಾಗವಾಗಿದ್ದು, ಆರ್ಥಿಕ ಸ್ವಾವಲಂಬಿಯಾಗಿ ಬದುಕು ನಡೆಸುತ್ತಿದ್ದಾರೆ.
ಎನ್‌ಆರ್‌ಎಲ್‌ಎಂ ಯೋಜನೆಯಡಿ ಹಿಂದೆ ಜಿಲ್ಲೆಯಲ್ಲಿ ಅಷ್ಟೊಂದು ಗಮನಾರ್ಹ ಚಟುವಟಿಕೆ ಮಾಡುತ್ತಿರಲಿಲ್ಲ. ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಯೋಜನೆಗೆ ಹೊಸ ರೂಪ ಕೊಟ್ಟು ಮಹಿಳಾ ಸಬಲೀಕರಣಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ. ಮಹಿಳಾ ಒಕ್ಕೂಟದಿಂದ ಸಿದ್ಧಪಡಿಸುವ ಉತ್ಪನ್ನಗಳನ್ನು ಅಕ್ಕ ಬ್ರ್ಯಾಂಡ್ ಮೂಲಕ ಮಾರಾಟ ಮಾಡಲಾಗುತ್ತಿದೆ. ಮುಂದಿನ ದಿನದಲ್ಲಿ ನಗರದಲ್ಲಿ ಇದಕ್ಕಾಗಿಯೇ ಪ್ರತ್ಯೇಕ ಮಾರುಕಟ್ಟೆ ತೆರೆಯಲಾಗುವುದು. ಈ ಸಂಬಂಧ ಶಾಸಕ ಪಿ.ರವಿಕುಮಾರ್ ಗಣಿಗ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ಮಾಡಲಾಗಿದೆ.
— ಎನ್.ಚಲುವರಾಯಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ