ಚಂದೂಪುರ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಸುಮಾರು 1.77 ಕೋಟಿ ರೂ. ವೆಚ್ಚದ ಅಗಸರ ಹಳ್ಳಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ಕದಲೂರು ಉದಯ್ ಭೂಮಿಪೂಜೆ ನೆರವೇರಿಸಿದರು. ಬಿ.ಬಸವರಾಜು, ಎ.ಎಸ್.ರಾಜೀವ್, ಹರೀಶ್ ಬಾಬು, ಕದಲೂರು ತಿಮ್ಮೇಗೌಡ ಇತರರಿದ್ದರು. 
ಮಂಡ್ಯ

ರೈತರನ್ನು ಆರ್ಥಿಕ ಸಂಕಷ್ಟಕ್ಕೆ ನೂಕುತ್ತಿರುವ ವಿಪಕ್ಷಗಳು

ನಾಗೇಶ ಎಸ್
ಕೆ.ಎಂ.ದೊಡ್ಡಿ: ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ವಿಪಕ್ಷಗಳು ರೈತರನ್ನು ಆರ್ಥಿಕ ಸಂಕಷ್ಟಕ್ಕೆ ನೂಕಲು ತಂತ್ರ ರೂಪಿಸಿವೆ ಎಂದು ಶಾಸಕ ಕದಲೂರು ಉದಯ್ ಕಿಡಿಕಾರಿದರು.
ಸಮೀಪದ ಚಂದೂಪುರ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಸುಮಾರು 1.77 ಕೋಟಿ ರೂ. ವೆಚ್ಚದಲ್ಲಿ ಅಗಸರ ಹಳ್ಳಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ರೈತರು ಟೌನ್‌ಶಿಪ್ ನಿರ್ಮಾಣ ಮಾಡಲು ಒಪ್ಪಿಗೆ ಸೂಚಿಸಿವೆ. ಆದರೂ ವಿಪಕ್ಷಗಳು ಅವರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚರ್ಚೆಗೆ ದಿನಾಂಕ ನಿಗದಿ ಮಾಡಿ ಆಹ್ವಾನ ನೀಡಿದ್ದು, ಆಹ್ವಾನದ ಮೇರೆಗೆ ಮುಖ್ಯಮಂತ್ರಿ ಬಳಿ ಚರ್ಚಿಸಬೇಕು. ಅದನ್ನು ಬಿಟ್ಟು ಬಿಡದಿಯ ಬೈರಮಂಗಲಕ್ಕೆ ಜೂ.27ರಂದು ಚರ್ಚೆಗೆ ಬನ್ನಿ ಎಂದು ಎಚ್‌ಡಿಕೆ ತಿಳಿಸಿದ್ದು, ಆ ದಿನ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಸೇರಿದಂತೆ ಮುಖ್ಯಮಂತ್ರಿಗೆ ಹಲವಾರು ಸರ್ಕಾರಿ ಕಾರ್ಯಕ್ರಮಗಳಿವೆ. ಹೀಗಾಗಿ ಆ ದಿನ ಚರ್ಚೆಗೆ ಆಹ್ವಾನಿಸಿರುವುದು ತರವಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಚುನಾವಣ ಮಾಂತ್ರಿಕ ಎಂದಿದ್ದಾರೆ. ಒಕ್ಕಲಿಗ ಸಮುದಾಯದ ಶಾಸಕರಲ್ಲದೆ ವಿರೋಧ ಪಕ್ಷದ ಹಲವು ಶಾಸಕರೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಅವರ ಆಡಳಿತ ವೈಖರಿಯನ್ನು ತೋರಿಸುತ್ತದೆ ಎಂದು ಶ್ಲಾಸಿದರು.
ರೈತರ ಬೆಳಗಳಿಗೆ ಅವಶ್ಯಕತೆ ಇರುವ ರಾಸಾಯನಿಕ ಗೊಬ್ಬರಕ್ಕೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವುದು ಕಂಡು ಬಂದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮದ್ದೂರು ತಾಲೂಕಿನ ನೀರಾವರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪಣತೊಟ್ಟಿದ್ದೇನೆ. ನೀರಾವರಿ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ಒಂದು ಸಾವಿರ ಕೋಟಿ ರೂ.ಗೂ ಅಧಿಕ ಅನುದಾನವನ್ನು ತಂದು ಕ್ಷೇತ್ರದ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹಗಲಿರುಳು ಶ್ರಮಿಸುತ್ತಿದ್ದೇನೆ ಎಂದರು.
ಈಗಾಗಲೇ ಸೂಳೆಕೆರೆ ನಾಲಾಭಿವೃದ್ಧಿ, ಕೆಮ್ಮಣ್ಣು ಕಾಲುವೆ ಅಭಿವೃದ್ಧಿ, ಬನ್ನಹಳ್ಳಿ ಏತ ನೀರಾವರಿ, ತಿಟ್ಟಮೇಲನಹಳ್ಳಿ ಏತ ನೀರಾವರಿ ಕಾಮಗಾರಿ ಪ್ರಗತಿ ಹಂತದಲ್ಲಿದ್ದು, ಶೀಘ್ರದಲ್ಲೇ ಪೂರ್ಣಗೊಂಡು ಸಾವಿರಾರು ಎಕರೆಗೆ ನೀರೊದಗಿಸಲಾಗುವುದು. ಈ ಮೂಲಕ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮದ್ದೂರು ಗ್ಯಾರಂಟಿ ಯೋಜನೆ ಅಧ್ಯಕ್ಷ ಬಿ. ಬಸವರಾಜು, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಗ್ರಾಪಂ ಮಾಜಿ ಅಧ್ಯಕ್ಷ ಕದಲೂರು ತಿಮ್ಮೇಗೌಡ, ಮುಖಂಡರಾದ ಹರೀಶ್ ಪಾಪಣ್ಣ, ಹಾಗಲಹಳ್ಳಿ ಶೇಖರ್, ಎಚ್.ಸಿ.ಕೆಂಪೇಗೌಡ, ಪುಟ್ಟಮಾದು, ಕೃಷ್ಣ, ಶಿವಲಿಂಗೇಗೌಡ, ವಿಶ್ವನಾಥ್, ಪ್ರಕಾಶ್, ರವಿ, ಚನ್ನಪ್ಪ, ಪುಟ್ಟೇಗೌಡ ಇದ್ದರು.