ಮಂಡ್ಯ ನಗರದ ಇತಿಹಾಸ ಪ್ರಸಿದ್ಧ ಲಕ್ಷ್ಮೀ ಜನಾರ್ದನಸ್ವಾಮಿ ದೇವಸ್ಥಾನದಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ವಿಶೇಷ ಪೂಜೆ ಸಲ್ಲಿಸಿದರು. 
ಮಂಡ್ಯ

ಅಚ್ಚುಕಟ್ಟಾಗಿ ಬ್ರಹ್ಮರಥೋತ್ಸವ ಆಚರಿಸೋಣ: ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿಕೆ

ಪ್ರಮುಖ ಮುಖ್ಯಾಂಶಗಳು

  • ಲಕ್ಷ್ಮೀ ಜನಾರ್ದನಸ್ವಾಮಿ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ
ಮಂಡ್ಯ: ನಗರದ ಇತಿಹಾಸ ಪ್ರಸಿದ್ಧ ಲಕ್ಷ್ಮೀ ಜನಾರ್ದನಸ್ವಾಮಿ ಬ್ರಹ್ಮರಥೋತ್ಸವವನ್ನು ಏ.27ರಂದು ಅದ್ಧೂರಿಯಾಗಿ ಆಚರಿಸೋಣ. ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಸೂಚಿಸಿದರು.
ಲಕ್ಷ್ಮೀ ಜನಾರ್ದನಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲಕ್ಷ್ಮೀ ಜನಾರ್ದನಸ್ವಾಮಿಗೆ ಅಪಾರ ಸಂಖ್ಯೆಯ ಭಕ್ತರಿದ್ದಾರೆ. ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವಕ್ಕೆ ವಜ್ರಖಚಿತ ಆಭರಣ ತೆಗೆದುಕೊಂಡು ಹೋಗುವ ಮುನ್ನ ಈ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಜತೆಗೆ ಬ್ರಹ್ಮರಥೋತ್ಸವ ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಆದರೆ ಇನ್ನು ಮುಂದೆ ರಥೋತ್ಸವ ಕಾರ್ಯಕ್ರಮವನ್ನು ವಿಶಿಷ್ಟ ಹಾಗೂ ಅದ್ಧೂರಿಯಾಗಿ ಮಾಡೋಣ ಎಂದರು.
ಲಕ್ಷ್ಮೀ ಜನಾರ್ದನಸ್ವಾಮಿ ಬ್ರಹ್ಮರಥೋತ್ಸವದ ಬಗ್ಗೆ ಹಿಂದಿನವರು ಹೆಚ್ಚಿನ ಗಮನಹರಿಸದ ಕಾರಣ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಮಾಡಿದ್ದಾರೆ. ಈ ವರ್ಷ ಕಡಿಮೆ ಸಮಯವಿದೆ. ಈ ಅವಧಿಯೊಳಗೆ ಎಷ್ಟು ಅಚ್ಚುಕಟ್ಟಾಗಿ ಹಾಗೂ ಅದ್ಧೂರಿಯಾಗಿ ಮಾಡೋಣ. ಶಾಮಿಯಾನ, ಪೆಂಡಾಲ್ ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡಬೇಕು. ಊಟದ ವ್ಯವಸ್ಥೆ ಅಚ್ಟುಕಟ್ಟಾಗಿ ನಿರ್ವಹಿಸಬೇಕು. ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಬಂದೋಬಸ್ತ್ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಬ್ರಹ್ಮರಥೋತ್ಸವಕ್ಕೆ ವೈಯಕ್ತಿಕವಾಗಿ ಒಂದು ಲಕ್ಷ ರೂ ನೀಡುತ್ತೇನೆ. ಅಂತೆಯೇ ಪ್ರತ್ಯೇಕ ಸಮಿತಿ ರಚಿಸಿ ನಿರ್ವಹಣೆ ಮಾಡಬೇಕು. ವಿದ್ಯುತ್ ದೀಪಾಲಂಕಾರ, ಪಟಾಕಿ ಸೇರಿದಂತೆ ಅಗತ್ಯ ಸಿದ್ಧತೆಯಾಗಬೇಕು. ಮುಂದಿನ ವರ್ಷದಿಂದ ಎಂಟು ದಿನ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಿಸಲಾಗುವುದು. ಇಲ್ಲಿನ ರಥೋತ್ಸವದ ಬಗ್ಗೆ ಹೆಚ್ಚಿನ ಪ್ರಚಾರ ಮಾಡಲಾಗುವುದು. ಅಂತೆಯೇ ಏ.25 ಮತ್ತು 26ರಂದು ಕರಪತ್ರವನ್ನು ನಗರಸಭೆಯಿಂದ ಪ್ರತಿ ಮನೆಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದರು.
ತಹಸೀಲ್ದಾರ್ ವಿಶ್ವನಾಥ್ ಇತರರಿದ್ದರು.

ಮಕ್ಕಳೊಂದಿಗೆ ಕಾಲಕಳೆದ ಶಾಸಕ
ಮಂಡ್ಯ ವಿಧಾನಸಭಾ ಕ್ಷೇತ್ರದ ಪಣಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ವಿಶೇಷ ಬೇಸಿಗೆ ಶಿಬಿರಕ್ಕೆ ಶಾಸಕ ಪಿ.ರವಿಕುಮಾರ್ ಗಣಿಗ ಬುಧವಾರ ಭೇಟಿ ನೀಡಿದರು. ಈ ವೇಳೆ ಮಕ್ಕಳು ಶಾಸಕರಿಗೆ ವಿಶೇಷ ಸ್ವಾಗತ ನೀಡಿದರು. ನಂತರ ಶಿಬಿರ ಉದ್ಘಾಟಿಸಿದ ರವಿಕುಮಾರ್, ಮಕ್ಕಳೊಂದಿಗೆ ಸುಮಾರು ಸಮಯ ಕಳೆದರು. ಬಿಇಒ ಮಹದೇವು, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರುದ್ರಪ್ಪ ಇತರರಿದ್ದರು.
ನಂತರ ತಾಲೂಕಿನ ಉಪ್ಪರಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೋಕನಹಳ್ಳಿ ಗ್ರಾಮದಲ್ಲಿ 30 ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಮಲ್ಲಾಘಟ್ಟ ಗ್ರಾಮದಲ್ಲಿ 10 ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ಗುಡಿಗೇನಹಳ್ಳಿ ಗ್ರಾಮದಲ್ಲಿ 20 ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಭೂಮಿ ಪೂಜೆ ನೆರವೇರಿಸಿದರು.