ಶ್ರೀರಂಗಪಟ್ಟಣದ ಐತಿಹಾಸಿಕ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕ್ಷೇತ್ರಪಾಲಕ ಶ್ರೀಆದಿರಂಗನಾಥನಿಗೆ ಗುರುವಾರ ವಿಶೇಷ ಪೂಜೆ ಅರ್ಪಿಸಿದ್ದು, ದೇವಾಲಯದ ಮುಂಭಾಗದಲ್ಲಿ ವಿಜೃಂಭಣೆಯ ಲಕ್ಷ ದೀಪೋತ್ಸವ ನೇರವೇರಿಸಲಾಯಿತು.
ದೇಗುಲದ ಅರ್ಚಕರ ನೇತೃತ್ವದಲ್ಲಿ ಚಾಲನೆ * ಸಹಸ್ರಾರು ಭಕ್ತಾದಿಗಳು ಭಾಗಿ
ಶ್ರೀರಂಗಪಟ್ಟಣ: ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣದ ಐತಿಹಾಸಿಕ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕ್ಷೇತ್ರಪಾಲಕ ಶ್ರೀಆದಿರಂಗನಾಥನಿಗೆ ಗುರುವಾರ ವಿಶೇಷ ಪೂಜೆ ಅರ್ಪಿಸಿದ್ದು, ದೇವಾಲಯದ ಮುಂಭಾಗದಲ್ಲಿ ವಿಜೃಂಭಣೆಯ ಲಕ್ಷ ದೀಪೋತ್ಸವ ನೇರವೇರಿಸಲಾಯಿತು.
ಶೇಷ ಶಯನ ಸ್ವರೂಪಿ ಶ್ರೀರಂಗನಾಥನಿಗೆ 80 ಕೆ.ಜಿ ಬೆಣ್ಣೆಯ ಅಲಂಕಾರ: ಮುಂಜಾನೆ 5 ಗಂಟೆಗೆ ಶ್ರೀಆದಿರಂಗನಾಥ ಸ್ವಾಮಿಗೆ ಪ್ರಥಮವಾಗಿ ದೇವಾಲಯದ ಪ್ರಧಾನ ಅರ್ಚಕ ವಿಜಯಸಾರತಿ ಹಾಗೂ ಪ್ರಸನ್ನ ಅವರ ನೇತೃತ್ವದಲ್ಲಿ ಸುಪ್ರಭಾತ ಸೇವೆ ಬಳಿಕ 18 ಅಡಿ ಉದ್ದದ ಸಾಲಿಗ್ರಾಮ ಶಿಲೆಯ ಶೇಷಶಯನ ಮೂರ್ತಿಗೆ ಸಂಪೂರ್ಣ ಬೆಣ್ಣೆ ಅಲಂಕಾರ, ಸೇವಾಕಾಲ, ತಿರುಪಾವೈ, ಸ್ವಾಮಿಗೆ ನಿತ್ಯ ಸೇವೆಗಳ ಜತೆಗೆ ಸ್ತಪನ ಮೂರ್ತಿಗೆ ಸುಗಂಧ ದ್ರವ್ಯಗಳಾದ ಕೇಸರಿ, ಏಲಕ್ಕಿ, ಲವಂಗ, ಪಚ್ಚ ಕರ್ಪೂರ, ಗಂಧ ಅಷ್ಟ ಗಂಧದ ಅಭಿಷೇಕ, ವಿಷ್ಣು ಸಹಸ್ರನಾಮ ಪಾರಾಯಣ, ಆರಾಧನೆ, ವೈವೇದ್ಯ, ಹೋಮ, ಬಲಿಪ್ರಧಾನ, ಹೋಮಗಳ ಅರ್ಪಣೆ ಬಳಿಕ ಶಾತಮೊರೈ ಪೂಜೆ ನೆರವೇರಿಸಲಾಗಿದ್ದು, ನಂತರ ದೇವಾಲಯಕ್ಕೆ ಆಗಮಿಸುತ್ತಿದ್ದ ಸಹಸ್ರರಾರು ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಿ ಬಳಿಕ ಸಿಹಿ ಪೊಂಗಲಿನ ಅನ್ನಪ್ರಸಾದ ಸಹ ವಿತರಿಸಲಾಯಿತು.
ವರ್ಷಕ್ಕೊಮ್ಮೆ ವಿಜೃಂಭಿಸುವ ವಿಶೇಷ ವೈಕುಂಠದ್ವಾರದ ತೆರವು :ಮಕರ ಸಂಕ್ರಾಂತಿ ವಿಶೇಷವಾಗಿ ಗುರುವಾರ ಸಂಜೆ ಶ್ರೀಮಹಾವಿಷ್ಣು ಸ್ವರೂಪಿಗೆ ವಿಶೇಷ ನೈವೇದ್ಯ, ಆರಾಧನೆ, ಹೋಮ, ಬಲಿಪ್ರಧಾನ ಅರ್ಪಣೆ ಬಳಿಕ ಅರ್ಚಕರು, ವೈದಿಕರು ದೇಗುಲದ ಆಡಳಿತ ಹಾಗೂ ವ್ಯವಸ್ಥಾಪನ ಸಮಿತಿ ಸಮ್ಮುಖದಲ್ಲಿ ಶ್ರೀದೇವಿ, ಭೂದೇವಿ ಸಮೇತವಿರುವ ಶ್ರೀ ಆದಿರಂಗನಾಥ ಸ್ವಾಮಿಗೆ ವೈಕುಂಠ ಮುಡಿಧಾರಣೆ ನಡೆಸಿ ಸ್ವಾಮಿಯ ಸಮ್ಮುಖದಲ್ಲಿ ಶ್ರೀ ರಂಗ ನಮ್ಮಾಳ್ವರ್ ಅವರಿಗೆ ದರ್ಶನ ನೀಡಿದ ವರ್ಷಕ್ಕೊಮ್ಮೆ ಮಾತ್ರ ತೆರೆಯಲಾಗುವ ವೈಕುಂಠ ದ್ವಾರ ವನ್ನು ಸಂಜೆ ಗೋಧೂಳಿ ಲಗ್ನದ 6 ಕ್ಕೆ ತೆರದು ಸಂಪ್ರದಾಯ ಪೂಜೆಗಳನ್ನು ನೇರವೇರಿಸಿ ಶ್ರೀರಂಗನಾಯಕಿ ಸಮೇತವಿರುವ ಸ್ವಾಮಿಯ ಪಂಚಲೋಹದ ವಿಶೇಷ ಉತ್ಸವಮೂರ್ತಿಯ ಪಲ್ಲಕ್ಕಿಯನ್ನು ಹೊತ್ತು ಸ್ವರ್ಗ ಬಾಗಿಲು ಸುತ್ತ ಪ್ರದಕ್ಷಿಣೆ ನಡೆಸಿ ಅಂತಿಮವಾಗಿ ಶ್ರೀರಂಗನ ಮೂಲದೇವರು ಇರುವ ವೈಕುಂಠ ದ್ವಾರವನ್ನು ತೆರದು ಪುಣ್ಯ ಪ್ರಾಪ್ತಿಗಾಗಿ ಭಕ್ತರ ಒಳಪ್ರವೇಶಕ್ಕೆ ಅನುಮತಿ ನೀಡಲಾಯಿತು.
ಮುಂಜಾನೆಯಿಂದ ಶ್ರೀರಂಗಪಟ್ಟಣ ಹಾಗೂ ಕ್ಷೇತ್ರದ ಸುತ್ತಮುತ್ತಲ ಗ್ರಾಮೀಣ ಜನರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ನೆರೆಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳ ಲಕ್ಷಾಂತರ ಭಕ್ತರು ಮತ್ತು ಜನರು ಪಟ್ಟಣಕ್ಕೆ ಕುಟುಂಬ ಸಮೇತ ಆಗಮಿಸಿ ಜೀವನದಿ ಕಾವೇರಿಯಲ್ಲಿ ಮಿಂದು ಶ್ರೀಆದಿರಂಗನ ದರ್ಶನ ಕಂಡು ವೈಕುಂಠ ದ್ವಾರ ಪ್ರವೇಶದೊಂದಿಗೆ ಗೋವಿಂದ, ನಾರಾಯಣ, ಮಹಾವಿಷ್ಣು, ಶ್ರೀಹರಿ, ಶ್ರೀಆದಿರಂಗನಾಥನೆಂದು ವಿವಿಧ ನಾಮಸ್ಮರಣೆಯೊಂದಿಗೆ ಪ್ರಾರ್ಥಿಸಿ ಪುನೀತರಾದರು.