ಶ್ರೀರಂಗಪಟ್ಟಣ ಸಮೀಪದ ಗಂಜಾಂನ ಶ್ರೀ ನಿಮಿಷಾಂಬ ದೇವಿಯ ಸನ್ನಿಧಿಯಲ್ಲಿ ಭಕ್ತರು ಜೀವನದಿ ಕಾವೇರಿಯಲ್ಲಿ ಪುಣ್ಯಸ್ನಾನ ನೆರವೇರಿಸಿ ಶಕ್ತಿ ದೇವಿಯ ದರ್ಶನ ಪಡೆದರು.
- ಮಾಘ ಮಾಸದ ಶುದ್ಧ ಹುಣ್ಣಿಮೆ
- ಗಂಜಾಂನ ಪ್ರಸಿದ್ಧ ಶ್ರೀ ನಿಮಿಷಾಂಬ ದೇಗುಲ
ಶ್ರೀರಂಗಪಟ್ಟಣ: ಮಾಘ ಮಾಸದ ಶುದ್ಧ ಹುಣ್ಣಿಮೆ ಪ್ರಯುಕ್ತ ಸಮೀಪದ ಗಂಜಾಂನ ಪ್ರಸಿದ್ಧ ಶ್ರೀ ನಿಮಿಷಾಂಬ ದೇಗುಲ ಸನ್ನಿಧಿಯ ಕಾವೇರಿ ನದಿಯಲ್ಲಿ ಲಕ್ಷಾಂತರ ಭಕ್ತರು ಪುಣ್ಯಸ್ನಾನ ನೆರವೇರಿಸಿ ಶಕ್ತಿ ದೇವಿಯ ದರ್ಶನ ಪಡೆದರು.
ಭಾನುವಾರ ಮುಂಜಾನೆ ದೇವಾಲಯದ ಪ್ರಧಾನ ಅರ್ಚಕ ಸೂರ್ಯನಾರಾಯಣ ಭಟ್ ಅವರ ನೇತೃತ್ವದಲ್ಲಿ ವೈದಿಕರು ಅಪೂರ್ವ ಬೀಜಾಕ್ಷರವುಳ್ಳ ಶ್ರೀಚಕ್ರ ಸಹಿತ ನಿಮಿಷಾಂಬ ದೇವಿಗೆ 108 ಸಲ ಹಾಲಿನ ಮಹಾ ಅಭಿಷೇಕ, ಪಂಚಾಮೃತ ಅಭಿಷೇಕ ಪೂರ್ವಕ ಮಹಾಭಿಷೇಕ ಸೇವೆ, ಬೆಳಗ್ಗೆ 8.30ಕ್ಕೆ ಕ್ಷೇತ್ರದ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರ ಸಮ್ಮುಖದಲ್ಲಿ ಗಣ ಹೋಮ, ನಕ್ಷತ್ರ ಹೋಮ, ದುರ್ಗಾ ಹೋಮ, ಮಹಾಹೋಮ ಹಾಗೂ ಸತ್ಯನಾರಾಯಣ ಪೂಜೆ ಅರ್ಪಣೆಯೊಂದಿಗೆ ವಿವಿಧ ಬಗೆಯ ವಿಶೇಷ ಪೂಜೆ ನೆರವೇರಿತು. ಬಳಿಕ ದೇವಿಯನ್ನು ವಸ್ತ್ರಗಳಿಂದ ಅಲಂಕಾರಗೊಳಿಸಿ ಚತುಷ್ಕಾಲ ಪೂಜೆ ಪ್ರಾರ್ಥನೆಯೊಂದಿಗೆ ದೇವರ ದರ್ಶನಕೆ ಅವಕಾಶ ಕಲ್ಪಿಸಲಾಯಿತು.
ಇದಕ್ಕೂ ಮುನ್ನ ವಿಶೇಷ ಕಾಷ್ಟ ರಥದಲ್ಲಿ ತಾಯಿ ನಿಮಿಷಾಂಬ ದೇವಿಯನ್ನು ಪ್ರಧಾನ ಅರ್ಚಕ ಸೂರ್ಯನಾರಾಯಣ್ ಅವರ ನೇತೃತ್ವದಲ್ಲಿ ಪ್ರತಿಷ್ಠಾಪಿಸಿ ದೇವಾಲಯದ ಅಂಗಳದ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಬ್ರಹ್ಮರಥೋತ್ಸವ ನೆರವೇರಿಸಲಾಯಿತು. ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಸ್.ಎನ್.ದಯಾನಂದ್, ಸಮಿತಿಯ ಇತರ ಸದಸ್ಯರು ಹಾಗೂ ದೇವಾಲಯ ಇಒ ಎಚ್.ಎಸ್.ಮಹೇಶ್ ಮತ್ತು ಇತರ ಗಣ್ಯರು ಪಾಲ್ಗೊಂಡಿದ್ದರು.
ಬೆಂಗಳೂರು, ತುಮಕೂರು, ಹಾಸನ, ಶಿವಮೊಗ್ಗ, ಮೈಸೂರು-ಮಂಡ್ಯ ಸೇರಿದಂತೆ ತಮಿಳುನಾಡು ಹಾಗೂ ಆಂಧ್ರಪ್ರದೇಶದಿಂದ ಲಕ್ಷಾಂತರ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸಿ ಜಮಾಯಿಸಿದ್ದರು. ಪೂರ್ವ ಪಾಪಗಳ ಪರಿಹಾರಕ್ಕೆ ತಂಡೋಪ ತಂಡವಾಗಿ ಜೀವನದಿ ನೀರಲ್ಲಿ ಮುಳುಗಿ ಪುಣ್ಯಸ್ನಾನ ನೆರವೇರಿಸಿ ಕಾವೇರಿಗೆ ತುಪ್ಪದ ದೀಪ ಬೆಳಗಿದ ಬಳಿಕ ಅರಳಿ ಮರದ ಕೆಳಗೆ ಕುಳಿತು ದೇವಿಯ ಮಂತ್ರಗಳ ಪಾರಾಯಣ ಮಾಡಿದರು.
ಮಾಘ ಹುಣ್ಣಿಮೆ ಹಿನ್ನೆಲೆ ದೇವಾಲಯ ಒಳಪ್ರವೇಶಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು. ಕಿಲೋ ಮೀಟರ್ ಉದ್ದದ ಸರತಿ ಸಾಲಿನಲ್ಲಿ ನಿಂತ ಸಹಸ್ರರಾರು ಭಕ್ತರು ಶಕ್ತಿ ದೇವಿಯ ದರ್ಶನ ಪಡೆದರು. ಭಕ್ತರಿಗಾಗಿ ಬೆಂಗಳೂರಿನ ಅನ್ನಪೂರ್ಣ ಟ್ರಸ್ಟ್ ವತಿಯಿಂದ ಸುಮಾರು 1 ಲಕ್ಷ ಲಾಡುಗಳನ್ನು ವಿತರಿಸಲಾಯಿತು. ಬೆಂಗಳೂರಿನ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ಅನ್ನಪ್ರಸಾದ ವಿನಿಯೋಗ ಮಾಡಲಾಯಿತು. ಸ್ಥಳೀಯ ಹಾಗೂ ಮೈಸೂರಿನ ವಿವಿಧ ಭಕ್ತಿ ಕಲಾಮಂಡಳಿ ವತಿಯಿಂದ ಭಕ್ತಿ, ಜಾನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
ದೇವಾಲಯಕ್ಕೆ ಆಗಮಿಸಿದ್ದ ಭಕ್ತರ ಸುರಕ್ಷತೆಗಾಗಿ ನದಿ ತೀರದಲ್ಲಿ ಸಾಕಷ್ಟು ಸುರಕ್ಷತಾ ಕ್ರಮ, ರಕ್ಷಣಾ ದೋಣಿ ಸಮೇತ ಅಗ್ನಿಶಾಮಕ ಸಿಬ್ಬಂದಿ ನಿಯೋಜನೆ, ವೈದ್ಯಕೀಯ ಸೌಲಭ್ಯ, ಮಹಿಳೆಯರ ಬಟ್ಟೆ ಬದಲಿಸಲು ತಾತ್ಕಾಲಿಕ ಕೊಠಡಿಗಳು, ಕಳ್ಳ-ಖದೀಮರ ನಿಯಂತ್ರಣಕ್ಕಾಗಿ ಆಯಕಟ್ಟಿನ ಸ್ಥಳದಲ್ಲಿ ಸಿ.ಸಿ.ಟಿವಿ, ಸವಿಸ್ತಾರವಾಗಿ ಬೆಳಕು ನೀಡಲು ವಿದ್ಯುತ್ ದೀಪಗಳ ಅಳವಡಿಕೆ, ಸರತಿ ಸಾಲಿನಲ್ಲಿ ಸುಗಮ ದರ್ಶನಕ್ಕೆ ವ್ಯವಸ್ಥೆ, ಪ್ರಸಾದ ವಿತರಣೆಗೆ ಕ್ರಮ ವಹಿಸಲಾಗಿತ್ತು.