ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿದರು.
- ಲಖಪತಿ ದೀದಿ ಯೋಜನೆಯಿಂದ ಮಹಿಳೆಯರಿಗೆ ಅನುಕೂಲ
- ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆ
- ಜಿಪಂ ಸಿಇಒ ಕೆ.ಆರ್.ನಂದಿನಿ ಅಧ್ಯಕ್ಷತೆಯಲ್ಲಿ ಸಭೆ
ಮಂಡ್ಯ: ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಸ್ವಸಹಾಯ ಗುಂಪುಗಳ ಮೂಲಕ ಸಂಜೀವಿನಿ ಮಹಿಳೆಯರನ್ನು ‘ಲಖಪತಿ ದೀದಿ’ಗಳನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಹೇಳಿದರು.
ನಗರದ ಜಿಪಂ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲಖಪತಿ ದೀದಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ವಿವಿಧ ಇಲಾಖೆ, ಬ್ಯಾಂಕ್ ಹಾಗೂ ಸಂಸ್ಥೆಗಳ ಸಮನ್ವಯತೆ ಮುಖ್ಯವಾಗಿದೆ ಎಂದರು.
ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ, ಮೀನುಗಾರಿಕೆ, ಕೈಗಾರಿಕೆ, ಕೃಷಿ ವಿಜ್ಞಾನ ಕೇಂದ್ರ, ನಬಾರ್ಡ್, ಬ್ಯಾಂಕ್ ಹಾಗೂ ಹಾಲು ಒಕ್ಕೂಟಗಳ ಸಹಕಾರದಿಂದ ಗ್ರಾಮೀಣ ಸ್ವ-ಸಹಾಯ ಸಂಘಗಳ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳು ನಿಗದಿತ ಜವಾಬ್ದಾರಿಗಳೊಂದಿಗೆ ಕಾರ್ಯನಿರ್ವಹಿಸಿ ಸಮಯಬದ್ಧ ಅನುಷ್ಠಾನ ಹಾಗೂ ನಿರಂತರ ಮೇಲ್ವಿಚಾರಣೆಯ ಮೂಲಕ ಲಖಪತಿ ದೀದಿ ಯೋಜನೆಯ ಗುರಿ ಸಾಧನೆಗೆ ಶ್ರಮಿಸಬೇಕೆಂದು ಸೂಚಿಸಿದರು.
ಇನ್ನು ಮತ್ಸ್ಯ ಸಂಜೀವಿನಿ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲೆಯ ಏಳು ತಾಲೂಕಿನಿಂದ ಒಟ್ಟು 37 ಕೆರೆಗೆ ಮೀನುಮರಿಗಳನ್ನು ಬಿಡುವಂತೆ 3 ತಿಂಗಳ ಹಿಂದೆಯೇ ತಿಳಿಸಲಾಗಿದ್ದರೂ, ಇದುವರೆಗೂ 12 ಕೆರೆಗಳಿಗಷ್ಟೇ ಮೀನುಮರಿಗಳನ್ನು ಬಿಡಲಾಗಿದೆ. ಫೆ.7ರಂದು 37 ಕೆರೆಗಳಿಗೂ ಮೀನುಗಳನ್ನು ಬಿಡಲು ಕ್ರಮ ವಹಿಸುವಂತೆ ಸೂಚಿಸಿದ ಅವರು, ಸಂಜೀವಿನಿ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲೆಯ ಏಳು ತಾಲೂಕಿನಿಂದ ಆಯ್ಕೆಯಾಗಿ ಒಟ್ಟು 175 ಫಲಾನುಭವಿಗಳಿಗೆ ಆರ್-ಸೆಟಿಯಲ್ಲಿ ತರಬೇತಿ ನೀಡಲಾಗಿದ್ದು, ವೈಯಕ್ತಿಕವಾಗಿ ಕೋಳಿಮರಿಗಳನ್ನು ಖರೀದಿಸದೆ ಇರುವುದು ಹಾಗೂ ಕೋಳಿ ಶೆಡ್ ನಿರ್ಮಾಣ ಆಯ್ಕೆ ಮಾಡದೆ ಇರುವ ಬಗ್ಗೆ ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ಫೆ.10ರೊಳಗೆ ಈ ಸಂಬಂಧ ಪ್ರಗತಿ ಸಾಧಿಸಲು ಕ್ರಮ ವಹಿಸಬೇಕು. ರಾಜ್ಯ ಕುಕ್ಕುಟ ಮಂಡಳಿಯಿಂದ ಕೋಳಿಮರಿಗಳು ಬರುವವರೆಗೂ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳ ಸ್ವಂತ ಸಂಪನ್ಮೂಲದಿಂದ/ಸಮುದಾಯ ಬಂಡವಾಳ ನಿಧಿಯನ್ನು ಬಳಕೆ ಮಾಡಿಕೊಂಡು ಕೋಳಿಮರಿಗಳನ್ನು ಖರೀದಿಸಿ ಪ್ರಗತಿ ಸಾಧಿಸಬೇಕೆಂದು ಸೂಚನೆ ನೀಡಿದರು.
ಪ್ರತೀ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳಲ್ಲೂ ಆಡಿಟ್, ವಾರ್ಷಿಕ ಸಭೆ ಮ್ತತು ಜಿಪಿಎಲ್‌ಎಫ್ ನವೀಕರಣ ಪ್ರಕ್ರಿಯೆಯನ್ನುಫೆ.12ರೊಳಗೆ ಪೂರ್ಣಗೊಳಿಸಿ, ವರದಿ ಸಲ್ಲಿಸಬೇಕು. ಇದಲ್ಲದೆ ಅಜೀವಿಕಾ ಗ್ರಾಮೀಣ ಎಕ್ಸ್‌ಪ್ರೆಸ್ ಯೋಜನೆಯಡಿ ಜಿಲ್ಲೆಯ ಶ್ರೀರಂಗಪಟ್ಟಣ ಮತ್ತು ಮಂಡ್ಯ ತಾಲೂಕಿನಲ್ಲಿ ಅನುಷ್ಠಾನ ಮಾಡಲು ಅನುದಾನ ಬಿಡುಗಡೆಯಾಗಿದ್ದು, ಕೂಡಲೇ ಅನುದಾನ ಬೇಡಿಕೆ ಪ್ರಸ್ತಾವನೆ ಸಲ್ಲಿಸಲು ಕ್ರಮ ವಹಿಸುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದ ಜಿಪಂ ಸಿಇಒ ಕೆ.ಆರ್.ನಂದಿನಿ, ಸ್ತ್ರೀ-ಸಾಮರ್ಥ್ಯ ಯೋಜನೆಯಡಿ ತರಬೇತಿಯಾಗದೆ ಬಾಕಿ ಉಳಿದಿರುವ ಫಲಾನುಭವಿಗಳ ಪಟ್ಟಿ, ಚಟುವಟಿಕೆ ವಿವರ ಹಾಗೂ ಅನುದಾನ ಬೇಡಿಕೆ ಪ್ರಸ್ತಾವನೆಯನ್ನು ಕೂಡಲೇ ಸಲ್ಲಿಸಲು ಕ್ರಮ ವಹಿಸಬೇಕು. ಇಲ್ಲವಾದಲ್ಲಿ ರಾಜ್ಯ ಅಭಿಯಾನ ನಿರ್ವಹಣಾ ಘಟಕಕ್ಕೆ ಅನುದಾನ ಹಿಂದಿರುಗಿಸಲಾಗುವುದೆಂದು ತಿಳಿಸಿದರು.
ಸಭೆಯಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಧನುಷ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರೂಪಶ್ರೀ, ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ಸಹಾಯಕ ಕೃಷಿ ಅಧಿಕಾರಿ ಶ್ರೀಹರ್ಷ ಇತರರಿದ್ದರು.