ಮಂಡ್ಯ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು. 
ಮಂಡ್ಯ

ಕಾರ್ಮಿಕರ ಮಕ್ಕಳು ಶಿಕ್ಷಣವಂತರಾಗಲಿ: ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಕಾರ್ಮಿಕರ ದಿನಾಚರಣೆ
  • ಕರ್ನಾಟಕ ಶ್ರಮಿಕ ಶಕ್ತಿ, ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕಾರ್ಮಿಕರ ಒಕ್ಕೂಟದ ಸಹಯೋಗದಲ್ಲಿ ಆಯೋಜನೆ
ಮಂಡ್ಯ: ಕಾರ್ಮಿಕರ ಮಕ್ಕಳು ಕಾರ್ಮಿಕರಾಗಿಯೇ ಉಳಿಯಬಾರದು. ಏಕೆಂದರೆ ನೀವು ಕಟ್ಟಡ ಕೆಲಸ ಅಥವಾ ಬೇರೆ ಯಾವುದೋ ಕೆಲಸ ಮಾಡುತ್ತೀರಾ ಎಂಬುವ ಪ್ರಶ್ನೆಯಲ್ಲ. ಇದರ ಬದಲಿಗೆ ನಿಮ್ಮ ಮಕ್ಕಳು ಶಿಕ್ಷಣವಂತರಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.
ನಗರದ ಗಾಂಧಿಭವನದಲ್ಲಿ ಕರ್ನಾಟಕ ಶ್ರಮಿಕ ಶಕ್ತಿ, ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕಾರ್ಮಿಕರ ಒಕ್ಕೂಟದ ಸಹಯೋಗದಲ್ಲಿ ನಾಲ್ಕು ಕಾರ್ಮಿಕ ಸಂಹಿತೆಗಳ ವಾಪಸಾತಿ, ಎಂಟು ಗಂಟೆ ಕೆಲಸ ಜಾರಿಗೆ, ಕನಿಷ್ಟ ವೇತನ 35,000 ರೂ ಜಾರಿಗೆ ಒತ್ತಾಯಿಸಿ ಬುಧವಾರ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕಾರ್ಮಿಕರ ಕಾಯಕದ ಜತೆಗೆ ಹಕ್ಕುಗಳನ್ನು ಕೇಳುವ ಮನೋಭಾವ ಬೆಳೆಸಿಕೊಳ್ಳಬೇಕು. ನೀವು ಸಂಘಟಿತರಾಗುವ ಮೂಲಕ ಅಭಿವೃದ್ಧಿ ಹೊಂದಬೇಕು. ಜಿಲ್ಲಾಡಳಿತ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ. ಯಾರಿಗೆ ನಿವೇಶನ ಇಲ್ಲವೋ ಸರ್ಕಾರಿ ಸ್ಥಳ ಗುರುತಿಸಿ ಕಾರ್ಮಿಕರಿಗೆ ನಿವೇಶನ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.
ನಿವೇಶನ ಇಲ್ಲದ ಕಾರ್ಮಿಕರಿಗೆ ಸರ್ಕಾರಿ ಸ್ಥಳವನ್ನು ಗುರುತಿಸಿ ನಿವೇಶನ ನೀಡುವ ಕೆಲಸ ಮಾಡಲಾಗುತ್ತಿದೆ. ಸಮಾಜದಲ್ಲಿ ಕಾರ್ಮಿಕರು ಒಂದು ಭಾಗವಾಗಿದ್ದು, ಅವರು ತಮ್ಮ ಹಕ್ಕುಗಳನ್ನು ಕೇಳುವ ನೈತಿಕ ಹಕ್ಕು ಬೆಳೆಸಿಕೊಳ್ಳಬೇಕು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿದರೆ ಮಾತ್ರ ಕಾರ್ಮಿಕರು ಮೌಲ್ಯಯುತ ಕೆಲಸದಲ್ಲಿ ಪ್ರಾವಿಣ್ಯತೆ ತೋರಲು ಸಾಧ್ಯವಾಗುತ್ತದೆ. ಕಾರ್ಮಿಕರ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳನ್ನು ಕೇಳಿ ಪಡೆದುಕೊಳ್ಳಬೇಕು. ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಿಂದ ಕಲಿಕಾ ಭಾಗ್ಯದಡಿ ಒಂದನೇ ತರಗತಿಯಿಂದ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಅನುದಾನ ಪಡೆದುಕೊಳ್ಳಬಹುದು, ಕಾರ್ಮಿಕ ಫಲಾನುಭವಿಯ ಇಬ್ಬರು ಹೆಣ್ಣು ಮಕ್ಕಳ ಮದುವೆ ಖರ್ಚಿಗಾಗಿ 60 ಸಾವಿರ ರೂ ನೀಡಲಾಗುತ್ತಿದೆ ಎಂದರು.
ಸರ್ಕಾರದಿಂದ ಸೌಲಭ್ಯ ಇರುವುದೇ ಕೆಲವರಿಗೆ ಗೊತ್ತಿರುವುದಿಲ್ಲ. ಈ ಜವಾಬ್ದಾರಿಯನ್ನು ಕಾರ್ಮಿಕ ಸಂಘಟನೆಗಳು ಮಾಡಬೇಕು. ಕಾರ್ಮಿಕರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. 1ನೇ ತರಗತಿ ಮಕ್ಕಳಿಗೆ ವಾರ್ಷಿಕ 1,800 ರೂ, ಉನ್ನತ ಶಿಕ್ಷಣಕ್ಕೆ 50 ಸಾವಿರ ರೂನಿಂದ 60 ಸಾವಿರ ರೂಗಳನ್ನು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಲಾಗುವುದು. ವಿಶೇಷವಾಗಿ ಫಲಾನುಭವಿಗಳಿಗೆ ವೈದ್ಯಕೀಯ ಸೌಲಭ್ಯಕ್ಕೆಂದು 20 ಸಾವಿರ ರೂ, ಅಪಘಾತದಲ್ಲಿ ಮರಣ ಹೊಂದಿದರೆ 8 ಲಕ್ಷ ರೂವರೆಗೂ ಕುಟುಂಬಸ್ಥರಿಗೆ ಅಪಘಾತ ವಿಮೆ ನೀಡಲಾಗುವುದು ಎಂದು ತಿಳಿಸಿದರು.
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಮಾತನಾಡಿ, ರೈತರ ಪಂಪ್‌ಸೆಟ್‌ಗಳಿಗೆ ಪ್ರೀಪೇಯ್ಡ ಮೀಟರ್ ಅಳವಡಿಸಲು ಹೊರಟಿರುವ ಕೇಂದ್ರ ಸರ್ಕಾರದ ನಡೆ ಖಂಡನೀಯ. ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳಲು ಸಲ್ಲದ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಸಂಕಷ್ಟಕ್ಕೆ ದೂಡುವುದು ಯಾವ ನ್ಯಾಯ. ಇದನ್ನು ಪ್ರಶ್ನಿಸಬೇಕು. ರೈತರು ಮತ್ತು ಕಾರ್ಮಿಕರು ವಿಶ್ವದ ಎರಡು ಕಣ್ಣುಗಳನ್ನು ಎನ್ನುವುದನ್ನು ಸರ್ಕಾರಗಳು ಮನಗಾಣಬೇಕು ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಸವಿತಾ ಮಾತನಾಡಿ, ಇಲಾಖೆಯಲ್ಲಿರುವ ಸೌಲಭ್ಯಗಳನ್ನು ತಿಳಿದುಕೊಂಡು ಅದನ್ನು ಪಡೆದುಕೊಳ್ಳಬೇಕು. ನಿಮಗಿರುವ ಸೌಲಭ್ಯವನ್ನು ನೀವೇ ಪಡೆದುಕೊಳ್ಳುವಲ್ಲಿ ಹಿಂದೆ ಉಳಿಯಬಾರದು. ನಿಮ್ಮ ಶ್ರಮಕ್ಕೆ ತಕ್ಕಫಲ ಸಿಗಬೇಕಾದರೆ ನೀವು ಸಂಘಟಿತರಾಗುವ ಮೂಲಕ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಶ್ರಮಿಕ ಶಕ್ತಿ ರಾಜ್ಯಾಧ್ಯಕ್ಷ ವರದರಾಜೇಂದ್ರ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜನಶಕ್ತಿ ಕಾರ್ಯದರ್ಶಿ ಎಂ.ಸಿದ್ದರಾಜು, ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕರ ಒಕ್ಕೂಟದ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ರೈಲ್ವೆ ಲೋಡಿಂಗ್ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷೆ ಅರುಣ, ಮಂಜುನಾಥ್ ಭಾಗವಹಿಸಿದ್ದರು. ಇದಕ್ಕೂ ಮುನ್ನ ನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನದಿಂದ ಗಾಂಧಿಭವನದವರೆಗೆ ನಡೆದ ಮೆರವಣಿಗೆಗೆ ಹಿರಿಯ ವಕೀಲ ಬಿ.ಟಿ.ವಿಶ್ವನಾಥ್ ಚಾಲನೆ ನೀಡಿದರು.