ಕಿಕ್ಕೇರಿ ಹೋಬಳಿಯ ಗೋವಿಂದನಹಳ್ಳಿ ಗ್ರಾಮದಲ್ಲಿ ವೀರಭದ್ರೇಶ್ವರ ಕೃಪಾಪೋಷಿತ ನಾಟಕ ಮಂಡಳಿಯಿಂದ ಆಯೋಜಿಸಿದ್ದ ಕುರುಕ್ಷೇತ್ರ ನಾಟಕದಲ್ಲಿ ಆರ್‌ಟಿಒ ಮಲ್ಲಿಕಾರ್ಜುನ ಮಾತನಾಡಿದರು. ಆನಂದ್, ಭರತ್ ಪ್ರಕಾಶ್, ಕುಮಾರ್ ಮತ್ತಿತರರಿದ್ದರು.  
ಮಂಡ್ಯ

ಸಾಮರಸ್ಯ ಬೆಸೆಯುವ ಕೊಂಡಿ ನಾಟಕ

ನಾಗೇಶ ಎಸ್
ಕಿಕ್ಕೇರಿ: ಮಾನವನಿಗೆ ಒಳಿತು, ಕೆಡುಕುಗಳನ್ನು ತೋರಿಸಿ ಸನ್ನಡತೆಯತ್ತ ಸಾಗಿಸಲು ದಾರಿದೀಪದಂತೆ ನಾಟಕಗಳಿವೆ ಎಂದು ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.
ಹೋಬಳಿಯ ಗೋವಿಂದನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ವೀರಭದ್ರೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಆಯೋಜಿಸಿದ್ದ ಕುರುಕ್ಷೇತ್ರ ನಾಟಕ ಪ್ರದರ್ಶನದಲ್ಲಿ ಮಾತನಾಡಿ, ಕುರುಕ್ಷೇತ್ರ ನಾಟಕದಲ್ಲಿರುವ ಎಲ್ಲ ಘಟನೆಗಳು ಬದುಕಿಗೆ ಹತ್ತಿರದ ಸತ್ಯ ಘಟನೆ, ಸಂಗತಿಗಳಾಗಿವೆ. ಹಠ, ದ್ವೇಷವಿದ್ದರೆ ದುರ್ಯೋಧನನ ಸ್ಥಿತಿ, ಧರ್ಮದ ಮಾರ್ಗದಲ್ಲಿ ನಡೆದರೆ ಧರ್ಮರಾಯನಂತೆ ಬದುಕುವ, ಶೂರನಂತಿದ್ದರೆ ಕರ್ಣನಂತೆ ಕೀರ್ತಿ, ಶಕ್ತಿಶಾಲಿಯಾದರೆ ಭೀಮನಂತಿರಲು, ಎಲ್ಲವನ್ನು ಅಳೆದು ಸುರಿಯುವ ರೀತಿಯಲ್ಲಿ ಸಂಧಾನವನ್ನು ಮಾಡುವ ಕೃಷ್ಣನಂತೆ ಇರಬೇಕು ಎಂಬುದನ್ನು ಕುರುಕ್ಷೇತ್ರ ನಾಟಕ ತೋರಿಸಿಕೊಡಲಿದೆ. ವಿಶ್ವಕ್ಕೆ ಕುರುಕ್ಷೇತ್ರ ನಾಟಕ ಸನ್ನಡತೆ ತೋರಿಸಿಕೊಡುವ ದಾರಿಯಾಗಿದೆ ಎಂದರು.
ಶಾಸಕ ಎಚ್.ಟಿ.ಮಂಜು ಮಾತನಾಡಿ, ದೂರದ ಆಲೋಚನೆ ಇಲ್ಲದೆ ವೀಕ್ಷಣೆ ಮಾಡುವ ದೂರದರ್ಶನ ಬದುಕನ್ನು ಕಿತ್ತುಕೊಳ್ಳುತ್ತಿದ್ದರೆ, ಮೊಬೈಲ್ ಯುವ ಸಮೂಹವನ್ನು ದಿಕ್ಕು ತಪ್ಪಿಸುತ್ತಿದೆ. ಎಲ್ಲರ ಮನಸ್ಸಿಗೆ ಉಲ್ಲಾಸ ನೀಡುವ ರಂಗಕಲೆ ಮೇಲೆ ಅಭಿರುಚಿ ಮೂಡಿಸಿಕೊಳ್ಳಿ. ಕಲೆ ಬದುಕನ್ನು ಕಟ್ಟಿಕೊಟ್ಟರೆ ಮೊಬೈಲ್ ಬದುಕನ್ನು ಕಿತ್ತುಕೊಳ್ಳಲಿದೆ. ಕಲಾವಿದರು ಸರ್ಕಾರದಿಂದ ಸಿಗುವ ಮಾಸಾಶನ ಪಡೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ಮುಖಂಡ ಚೋಕನಹಳ್ಳಿ ಪ್ರಕಾಶ್ ಮಾತನಾಡಿ, ನಾಟಕಗಳನ್ನು ಕಲಾವಿದರು ಕಷ್ಟಪಟ್ಟು ಮಾಡಲಿದ್ದು, ನಾಟಕ ಮುಗಿಯುವವರಿಗೆ ವೀಕ್ಷಣೆ ಮಾಡಿ ಎಂದು ವಿನಂತಿಸಿದರು. ತಾಪಂ ಮಾಜಿ ಸದಸ್ಯ ಶಾಮಣ್ಣ, ಕೆಂಪೇಗೌಡ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಸ್. ಆನಂದ್, ಭರತ್ ಮಾಸ್ತಿ, ಪ್ರಕಾಶ್, ಕುಮಾರ್, ಅಶೋಕ, ಚಿನ್ನಸ್ವಾಮಿ, ಮೂರ್ತಿ, ಲಿಂಗಪ್ಪ, ರೇಣುಕಾ, ನಾಗರಾಜು, ಗ್ರಾಮ ಮುಖಂಡರು ಇದ್ದರು.