ಪಾಂಡವಪುರ ತಾಲೂಕಿನ ವದೇಸಮುದ್ರ ಗ್ರಾಮದಲ್ಲಿ ಆಯೋಜಿಸಿದ್ದ ಕ್ಷೀರಸಂಜೀವಿನಿ ಬಡ್ಡಿರಹಿತ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್ ಮಾತನಾಡಿದರು. ಆರ್.ಪ್ರಸಾದ್, ಉಷಾ, ಸುಕನ್ಯಾ, ಬಸಮಣಿ, ಉಪಾಧ್ಯಕ್ಷೆ ಸಾಕಮ್ಮ ಇದ್ದರು.
ಪಾಂಡವಪುರ: ಮಹಿಳೆಯ ಆರ್ಥಿಕ ಸಬಲೀಕರಣಕ್ಕಾಗಿ ಒಕ್ಕೂಟದಿಂದ ಕ್ಷೀರಸಂಜೀವಿನಿ ಯೋಜನೆಯಡಿ ಮಹಿಳೆಯರಿಗೆ ಬಡ್ಡಿ ರಹಿತ ಸಾಲಸೌಲಭ್ಯ ನೀಡಲಾಗುತ್ತಿದೆ ಎಂದು ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್ ಹೇಳಿದರು.
ತಾಲೂಕಿನ ವದೇಸಮುದ್ರ ಗ್ರಾಮದಲ್ಲಿ ಕೆಎಂಎಫ್ ಹಾಗೂ ಮನ್‌ಮುಲ್ ಒಕ್ಕೂಟದಿಂದ ಆಯೋಜಿಸಿದ್ದ ಕ್ಷೀರಸಂಜೀವಿನಿ ಯೋಜನೆಯಡಿ 7 ಲಕ್ಷವರೆಗಿನ ಬಡ್ಡಿರಹಿತ ಸಾಲವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೆಎಂಎಫ್ ಹಾಗೂ ಮನ್‌ಮುಲ್ ಒಕ್ಕೂಟವು ಮಹಿಳೆಯರನ್ನು ಹೈನುಗಾರಿಕೆ ಮೂಲಕ ಆರ್ಥಿಕವಾಗಿ ಸಬಲೀಕರಣಗೊಳಿಸಬೇಕು ಎಂಬ ಉದ್ದೇಶದಿಂದ ಆಯ್ದ ಮಹಿಳಾ ಸಹಕಾರ ಸಂಘಗಳಿಗೆ ಶೂನ್ಯ ಬಡ್ಡಿಯಲ್ಲಿ ತಲಾ 50 ಸಾವಿರ ರೂ.ನಂತೆ 7 ಲಕ್ಷ ರೂ. ಸಾಲ ವಿತರಣೆ ಮಾಡಲಾಗುತ್ತಿದೆ. ತಾಲೂಕಿನಲ್ಲಿ 148 ಡೇರಿಗಳ ಪೈಕಿ 71 ಮಹಿಳಾ ಸಹಕಾರ ಸಂಘಗಳಿಂದ ಉತ್ತಮವಾಗಿ ಕೆಲಸ ಮಾಡುತ್ತಿರುವ ವದೇ ಸಮುದ್ರ ಗ್ರಾಮದ ಡೇರಿಯನ್ನು ಆಯ್ಕೆ ಮಾಡಿ ಸಾಲ ವಿತರಣೆ ಮಾಡಲಾಗುತ್ತಿದೆ. ಸಾಲ ಸೌಲಭ್ಯಕ್ಕೆ ಆಯ್ಕೆಯಾಗಿ ಸಾಲಪಡೆಯುವ ಮಹಿಳೆಯರು ಆ ಹಣದಿಂದ ಕಡ್ಡಾಯವಾಗಿ ಹಸುಗಳನ್ನು ಖರೀದಿಸಬೇಕು. ಹೈನುಗಾರಿಕೆ ನಡೆಸಿ ಸಂಘಕ್ಕೆ ಸಾಲ ಮರುಪಾವತಿ ಮಾಡುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕೊಡುಗು ಜಿಲ್ಲೆಯಲ್ಲಿ ಆರಂಭವಾದ ರಾಜ್ಯದ ಮೊದಲ ಡೇರಿಯೂ ಇಂದು ದೊಡ್ಡ ಉದ್ಯಮವಾಗಿ ಬೆಳೆದಿದೆ. ಯುವಕರು ಹೆಚ್ಚು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಹಾಲು ಉತ್ಪಾದನೆಯೂ ಸಹ ಹೆಚ್ಚುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಮನ್‌ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗ ವಿಸ್ತರಣಾಧಿಕಾರಿ ಉಷಾ, ಕ್ಷೀರ ಸಂಜೀವಿನಿ ಯೋಜನೆಯ ಕಾರ್ಯಕರ್ತೆ ಸುಕನ್ಯಾ, ಡೇರಿ ಅಧ್ಯಕ್ಷೆ ಬಸಮಣಿ, ಉಪಾಧ್ಯಕ್ಷೆ ಸಾಕಮ್ಮ, ನಿರ್ದೇಶಕರಾದ ರತ್ನಮ್ಮ, ಶಶಿಕಲಾ, ವಸಂತಾ, ನಂಜಮ್ಮ, ಸರಸ್ವತಮ್ಮ, ಶಶಿಕಲಾ, ಸುನಿತಾ, ಕಾರ್ಯದರ್ಶಿ ಮೀನಾಕ್ಷಿ, ಮುಖಂಡರಾದ ಚಿಕ್ಕಾಡೆ ಚೇತನ್, ಸೊಸೈಟಿ ಅಧ್ಯಕ್ಷ ಎನ್.ಪಿ.ದಿನೇಶ್, ನಿರ್ದೇಶಕ ಬೊಮ್ಮರಾಜು, ಮಹದೇವಪ್ಪ ಸೇರಿದಂತೆ ಗ್ರಾಮದ ಮುಖಂಡರು, ಯಜಮಾನರು, ಯುವಕರು ಇದ್ದರು.