ವಸತಿ ಶಾಲಾ ಮಕ್ಕಳಿಗೆ ಸ್ಪರ್ಶ್ ಕುಷ್ಠರೋಗದ ಬಗ್ಗೆ ಅರಿವು ಕಾರ್ಯಕ್ರಮ. 
ಮಂಡ್ಯ

. ಕುಷ್ಟರೋಗಿಗಳು ಶಾಪಗ್ರಸ್ತರಲ್ಲ

ಎ. ಆರ್. ರಘುರಾಮ
ಕೆ.ಆರ್.ಸಾಗರ: . ಕುಷ್ಟರೋಗಿಗಳು ಶಾಪಗ್ರಸ್ತರಲ್ಲ ಮತ್ತು ಕಳಂಕಿತರಲ್ಲ ಕುಷ್ಟರೋಗಿಗಳನ್ನ ಸಮಾಜದಲ್ಲಿ ಯಾವುದೇ ತಾರತಮ್ಯ ಮಾಡದೆ ಗೌರಯುತವಾಗಿ ಕಾಣಬೇಕೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಹೇಳಿದರು.
ಬೆಳಗೊಳ ಗ್ರಾಮದ ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಕಚೇರಿ ಹಾಗೂ ಬೆಳಗೊಳ ಆಯುಷ್ಮಾನ್ ಆರೋಗ್ಯ ಕೇಂದ್ರ ವತಿಯಿಂದ ಆಯೋಜಿಸಿದ್ದ ಸ್ಪರ್ಶ್ ಕುಷ್ಠ ರೋಗ ಅರಿವು ಆಂದೋಲನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಈ ರೋಗವು ಮುಖ್ಯವಾಗಿ ಚರ್ಮ ಮತ್ತು ನರಗಳಿಗೆ ಸಂಬಂಧಿತವಾಗಿದ್ದು ಇದು ಮೈಕೋಬ್ಯಾಕ್ಟೀರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಬರುತ್ತದೆ ವ್ಯಕ್ತಿಯ ದೇಹದ ಮೇಲೆ ತಿಳಿ ಬಿಳಿ ತಾಮ್ರ ವರ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆ,ದಪ್ಪವಾದ ಅಥವಾ ಹೊಳೆಯುವ ಎಣ್ಣೆಯುಕ್ತ ಚರ್ಮ,ಗಂಟುಗಳು,ಕಣ್ಣಿನ ರೆಪ್ಪೆಗಳನ್ನು ಮುಚ್ಚಲು ಅಸಮರ್ಥತೆ,ಕೈಕಾಲುಗಳಲ್ಲಿ ವಾಸಿಯಾಗದ ಹುಣ್ಣುಗಳು, ನಡೆಯುವಾಗ ಕಾಲು ಎಳೆಯುವುದು,ಕಾಲುಗಳಲ್ಲಿ ಜುಮ್ಮೆನಿಸುವಿಕೆ,ಕೈಗಳಲ್ಲಿ ವಸ್ತುಗಳನ್ನು ಹಿಡಿಯಲು ಅಥವಾ ಪಾದರಕ್ಷೆ ತೊಡುವಲ್ಲಿ ಬಲಹೀನತೆ ಇವುಗಳು ರೋಗದ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಂಡು ಉಚಿತವಾಗಿ ಬಹು ಔಷಧಿ ಚಿಕಿತ್ಸೆ ಪಡೆದು ಕುಷ್ಠ ರೋಗವನ್ನು ತೊಲಗಿಸಬಹುದಾಗಿದೆ ಎಂದರು.
ನಂತರ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಯರಾಮ್ ಟಿ ಬಿ ಮಾತನಾಡಿ
ಜ 30 ರಿಂದ ಫೆಬ್ರುವರಿ 13 ರವರೆಗೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜನರಲ್ಲಿರುವ ಕಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ಮತ್ತು ಕುಷ್ಠ ರೋಗದಿಂದ ಯಾರು ಬಾರಿತರಾಗದಂತೆ ನೋಡಿ ಕೊಳ್ಳುವುದು ರೋಗ ಲಕ್ಷಣಗಳ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸಿ ಪ್ರಾರಂಭದ ಹಂತದಲ್ಲಿ ಚಿಕಿತ್ಸೆ ಪಡೆಯದಿದ್ದಲ್ಲಿ ರೋಗದಿಂದ ಉಂಟಾಗುವ ವಿಕಲತೆಯ ಬಗ್ಗೆ ಜನರಿಗೆ, ನೆರೆಹೊರೆಯವರಿಗೆ ಸೂಕ್ತ ತಿಳುವಳಿಕೆ ನೀಡುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ ಬನ್ನಿ ನಾವೆಲ್ಲರೂ ಸೇರಿ ಒಟ್ಟಾಗಿ ಭಾರತವನ್ನು ಕುಷ್ಟರೋಗ ಮುಕ್ತವಾಗಿಸೋಣ ಗಾಂಧೀಜಿ ಕನಸು ನನಸಾಗಿಸೋಣ ಎಂದರು.
ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ ಮೋಹನ್ ಪ್ರತಿಜ್ಞಾವಿಧಿ ಬೋಧಿಸಿದರು.
ಪ್ರಾಂಶುಪಾಲ ಡಿ ಎಂ ಅಭಿಲಾಷ ಅಧ್ಯಕ್ಷತೆ ವಹಿಸಿದ್ದರು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಟಿ ಟಿ ಜ್ಯೋತಿ,ಆರೋಗ್ಯ ನಿರೀಕ್ಷಣಾಧಿಕಾರಿ ಎಂ ಸಿ ಚಂದನ,ವಸತಿ ಶಾಲೆಯ ನರ್ಸಿಂಗ್ ಅಧಿಕಾರಿ ರವಿ ಪ್ರಕಾಶ್ ಎಸ್ ಹಾಗೂ ಆಶಾ ಕಾರ್ಯಕರ್ತೆ ಜಯಂತಿ ಉಪಸ್ಥಿತರಿದ್ದರು.