ಕೆ.ಆರ್.ಪೇಟೆ ಸಮೀಪದ ಹೇಮಾವತಿ ನದಿ ತೀಋದ ಹೇಮಗಿರಿಯ ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿಯವರ ಬ್ರಹ್ಮ ರಥೋತ್ಸವ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಕೆ.ಆರ್.ಪೇಟೆ : ಹೇಮಾವತಿ ನದಿ ದಂಡೆಯಲ್ಲಿರುವ ಹೇಮಗಿರಿಯ ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿಯವರ ಬ್ರಹ್ಮ ರಥೋತ್ಸವವು ರಥಸಪ್ತಮಿಯ ಪವಿತ್ರ ದಿನವಾದ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಶಾಸಕ ಎಚ್.ಟಿ.ಮಂಜು ಮತ್ತು ತಹಸೀಲ್ದಾರ್ ಡಾ.ಎಸ್. ಯು.ಅಶೋಕ್ ಅವರು ರಥಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ಬ್ರಹ್ಮರಥೋತ್ಸವದಲ್ಲಿ ಭಾಗವಹಿಸಿ ರಥಕ್ಕೆ ಹಣ್ಣು, ದವನ ಸಮರ್ಪಿಸಿ ವೆಂಕಟರಮಣ ಸ್ವಾಮಿ ಉಘೇ.. ಉಘೇ ಶ್ರೀನಿವಾಸ, ಗೋವಿಂದ... ಉಘೇ ಉಘೇ.. ಎಂಬ ಜಯಘೋಷಗಳನ್ನು ಕೂಗುತ್ತಾ ರಥ ಎಳೆದು ತಮ್ಮ ಭಕ್ತಿ-ಭಾವ ಸಮರ್ಪಣ ಮಾಡಿದರು.
ರಥೋತ್ಸವ ಮತ್ತು ಉತ್ತಮ ರಾಸುಗಳನ್ನು ಕರೆತಂದ ಜಾತ್ರೆಯ ರಂಗನ್ನು ಹೆಚ್ಚಿಸಿದ ರೈತರಿಗೆ ಬಹುಮಾನ ವಿತರಣೆ ಮಾಡಿದ ನಂತರ ಮಾತನಾಡಿದ ಶಾಸಕ ಮಂಜು, ಜಾತ್ರೆ ರಥೋತ್ಸವಗಳು, ಹಬ್ಬ ಹರಿದಿನಗಳು ನಮ್ಮ ಸಂಸ್ಕೃತಿಯ-ಪರಂಪರೆಯ ಪ್ರತಿಬಿಂಬ ಎಂದರು.
ಹಬ್ಬದ ಸಂಭ್ರಮದಲ್ಲಿ ಎಲ್ಲರೂ ಒಂದಾಗಿ ಭಾಗವಹಿಸುವುದರಿಂದ ಸ್ನೇಹ ಸಹಬಾಳ್ವೆಯು ಹೆಚ್ಚಾಗುವ ಮೂಲಕ ನೆಮ್ಮದಿಯ ಜೀವನಕ್ಕೆ ನಾಂದಿಯಾಗಲಿದೆ. ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾದರೆ ಹಬ್ಬ, ಜಾತ್ರೆ, ಉತ್ಸವಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಜಾತ್ರೆಗೆ ಆಗಮಿಸಿದ್ದ ಉತ್ತಮ ರಾಸುಗಳಿಗೆ ತಾಲೂಕು ಆಡಳಿತ ಹಾಗೂ ಹೇಮಗಿರಿ ಸಕ್ಕರೆ ಕಾರ್ಖಾನೆಯ ವತಿಯಿಂದ 60ಕ್ಕೂ ಹೆಚ್ಚು ರೈತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ಮಾಜಿ ಸಚಿವ ನಾರಾಯಣಗೌಡ, ಹೇಮಗಿರಿ ಸಕ್ಕರೆ ಕಾರ್ಖಾನೆಯ ಸೀನಿಯರ್ ಜನರಲ್ ಮ್ಯಾನೇಜರ್ ವರದರಾಜನ್, ಹಿರಿಯ ಕಬ್ಬು ಅಭಿವೃದ್ಧಿ ಅಧಿಕಾರಿ ದತ್ತಾತ್ರೇಯ, ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ. ದೇವರಾಜು, ಕಂದಾಯ ನಿರೀಕ್ಷಕ ಜ್ಞಾನೇಶ, ಗ್ರಾಮ ಲೆಕ್ಕಾಧಿಕಾರಿ ಮಲ್ಲಿಕಾರ್ಜುನ ಇದ್ದರು.