ವಜ್ರಖಚಿತ ಕೃಷ್ಣರಾಜಮುಡಿ ಕಿರೀಟ.
ಮೇಲುಕೋಟೆ: ಶ್ರೀ ಚೆಲುವನಾರಾಯಣ ಸ್ವಾಮಿ ಕೃಷ್ಣರಾಜಮುಡಿ ಕಿರೀಟಧಾರಣ ಮಹೋತ್ಸವ ಆಗಸ್ಟ್ 3ರಂದು ರಾತ್ರಿ 7 ಗಂಟೆಗೆ ನೆರವೇರಲಿದೆ.
ಮುಮ್ಮುಡಿ ಶ್ರೀ ಕೃಷ್ಣರಾಜ ಒಡೆಯರ್ ಅವರು ಆಷಾಢ ಮಾಸದಲ್ಲಿ ಆರಂಭಿಸಿರುವ ಜಾತ್ರಾ ಮಹೋತ್ಸವದ ಧಾರ್ಮಿಕ ಕೈಂಕರ್ಯಗಳು ಜು.29ರಿಂದ ಆರಂಭವಾಗಿ ಆಗಸ್ಟ್ 9ರವರೆಗೆ ನಡೆಯಲಿವೆ.
ಚೆಲುವನಾರಾಯಣ ಸ್ವಾಮಿಗೆ ವೈರಮುಡಿ ಬ್ರಹ್ಮೋತ್ಸವ ಬಿಟ್ಟರೆ ಮೈಸೂರು ಮಹಾರಾಜ ಮುಮ್ಮುಡಿ ಶ್ರೀ ಕೃಷ್ಣರಾಜ ಒಡೆಯರ್ ಜನ್ಮ ನಕ್ಷತ್ರದಂದು ಮಹಾಭಿಷೇಕ ಮತ್ತು ಕಲ್ಯಾಣೋತ್ಸವ ನಡೆಯುತ್ತದೆ. ಈ ವರ್ಷ ಮುಮ್ಮುಡಿ ಶ್ರೀ ಕೃಷ್ಣರಾಜ ಒಡೆಯರ್ ಜನ್ಮ ನಕ್ಷತ್ರದ ಅಂಗವಾಗಿ ಜು.31ರಂದು ಚೆಲುವನಾರಾಯಣ ಸ್ವಾಮಿಗೆ ಮಹಾಭಿಷೇಕ ಹಾಗೂ ಕಲ್ಯಾಣೋತ್ಸವ ನಡೆಯಲಿದೆ. ಬೆಳಗ್ಗೆ ಗರುಡ ಧ್ವಜಾರೋಹಣ ನಡೆಯಲಿದೆ.
ಕೃಷ್ಣರಾಜಮುಡಿ ಬ್ರಹ್ಮೋತ್ಸವದ ನಾಲ್ಕನೇ ದಿನವಾದ ಆ.3ರಂದು ಶ್ರೀ ಕೃಷ್ಣರಾಜಮುಡಿ ಕಿರೀಟಧಾರಣ ಮಹೋತ್ಸವ ನಡೆಯಲಿದೆ. ಮಂಡ್ಯ ಜಿಲ್ಲಾ ಖಜಾನೆಯಲ್ಲಿರುವ ಕೃಷ್ಣರಾಜಮುಡಿ ತಿರುವಾಭರಣ ಪೆಟ್ಟಿಗೆಯನ್ನು ಪೊಲೀಸ್ ಭದ್ರತೆಯೊಂದಿಗೆ ಮೇಲುಕೋಟೆಗೆ ತಂದು ಪಾರ್ಕಾವಣೆ ಮಾಡಿ ಶ್ರೀದೇವಿ-ಭೂದೇವಿ ಸಮೇತನಾಗಿ ಗರುಡಾರೂಢನಾದ ಚೆಲುವನಾರಾಯಣಸ್ವಾಮಿಗೆ ಧರಿಸಿ ನಾಲ್ಕು ಬೀದಿಗಳಲ್ಲಿ ಉತ್ಸವ ನೆರವೇರಿಸಲಾಗುತ್ತದೆ. ಕೃಷ್ಣರಾಜಮುಡಿ ಕಿರೀಟ ಆ.3ರಿಂದ 8ರವರೆಗೆ ವಿವಿಧ ಉತ್ಸವಗಳಲ್ಲಿ ಚೆಲುವನಾರಾಯಣನನ್ನು ಅಲಂಕರಿಸಲಿದೆ. 8ರಂದು ಶನಿವಾರ ಕಲ್ಯಾಣಿಯಲ್ಲಿ ನಡೆಯುವ ತೀರ್ಥಸ್ನಾನದೊಂದಿಗೆ ಬ್ರಹ್ಮೋತ್ಸವ ಸಂಪನ್ನವಾಗಲಿದೆ.
ಜು.29ರಿಂದ ಆಗಸ್ಟ್ 9ರವರೆಗೆ ದೇವಾಲಯದ ರಾಜಗೋಪುರ, ರಾಜಬೀದಿ, ಉತ್ಸವ ಬೀದಿಗಳಿಗೆ ದೀಪಾಲಂಕಾರ ಮಾಡಲಾಗುವುದು ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕನಗೋನಹಳ್ಳಿ ಪರಮೇಶಗೌಡ ಮತ್ತು ಸದಸ್ಯ ಕಾಡೇನಹಳ್ಳಿ ಸತೀಶ್ ಮಾಹಿತಿ ನೀಡಿದ್ದಾರೆ.
ಕೃಷ್ಣರಾಜಮುಡಿ ಬ್ರಹ್ಮೋತ್ಸವದಲ್ಲಿ ಪುಷ್ಪಾಲಂಕಾರ, ಪುಷ್ಪ ಕೈಂಕರ್ಯ ಸೇರಿದಂತೆ ಹಲವು ಸೇವೆಗಳನ್ನು ಭಕ್ತರು ನೆರವೇರಿಸಬಹುದು ಎಂದು ಇಒ ಶೀಲಾ ತಿಳಿಸಿದ್ದಾರೆ. ಕಲ್ಯಾಣೋತ್ಸವ ಮತ್ತು ಮಹಾಭಿಷೇಕದಂದು ಚೆಲುವನಾರಾಯಣ ಸ್ವಾಮಿ ಸನ್ನಿಧಿಯ ಆವರಣ ಕಲ್ಯಾಣೋತ್ಸವ ನಡೆಯುವ ಅಮ್ಮನವರ ಸನ್ನಿಧಿ ಪ್ರಾಂಗಣಕ್ಕೆ ಪುಷ್ಪಾಲಂಕಾರ ಸೇವೆ ಮಾಡಬಹುದು. ಬ್ರಹ್ಮೋತ್ಸವದಲ್ಲಿ ನಡೆಯುವ ವಾಹನೋತ್ಸವಗಳ ಸೇವೆ ಮಾಡಲು ಅವಕಾಶವಿದೆ ಎಂದು ತಿಳಿಸಿದ್ದಾರೆ.