ನಾಗಮಂಗಲ ತಾಲೂಕಿನ ಮಾವಿನಕಟ್ಟೆಕೊಪ್ಪಲು ಗ್ರಾಮದ ವಿಶೇಷ ಚೇತನ ಎಂ.ಕೆ.ಕೃಷ್ಣಮೂರ್ತಿ (ಕುದುರೆ ಮೂರ್ತಿ)
ನಾಗಮಂಗಲ: ತಾಲೂಕಿನ ಮಾವಿನಕಟ್ಟೆಕೊಪ್ಪಲು ಗ್ರಾಮದ ಅಂಧ ಕ್ರೀಡಾಪಟು ಎಂ.ಕೆ.ಕೃಷ್ಣಮೂರ್ತಿ (ಕುದುರೆ ಮೂರ್ತಿ) ಅವರು ಒಡಿಶಾ ರಾಜ್ಯದ ಬುಭನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 24ನೇ ರಾಷ್ಟ್ರಮಟ್ಟದ ಪ್ಯಾರಾ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಜಾವೆಲಿನ್ ಥ್ರೋ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದು ತಾಲೂಕು ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ತಾಲೂಕಿನ ಹರದನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಂ.ಕೆ.ಕೃಷ್ಣಮೂರ್ತಿ ಅವರು ಅಂಧರಾಗಿದ್ದರೂ ಕುದುರೆ ಸಾಕಣೆ ಮಾಡಿಕೊಂಡು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಮರ‌್ನಾಲ್ಕು ವರ್ಷದಿಂದ ದೈಹಿಕ ಶಿಕ್ಷಕ ವಿಜಯಕುಮಾರ್ ಅವರಿಂದ ಜಾವೆಲಿನ್ ಥ್ರೋ ತರಬೇತಿ ಪಡೆಯುತ್ತಿದ್ದರು. ಕಳೆದ 2024ರಲ್ಲಿ ಗೋವಾ ಹಾಗೂ 2025ರಲ್ಲಿ ಚೆನೈನಲ್ಲಿ ನಡೆದ ರಾಷ್ಟ್ರ ಮಟ್ಟದ ಜಾವೆಲಿನ್ ಥ್ರೋ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಒಡಿಶಾ ರಾಜ್ಯ ಬುಭನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಮಾ.17ರಿಂದ 21ರ ವರೆಗೆ ನಡೆದ ರಾಷ್ಟ್ರ ಮಟ್ಟದ ಪ್ಯಾರಾ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕರ್ನಾಟಕದಿಂದ ಭಾಗವಹಿಸಿದ್ದ ಒಟ್ಟು 40 ಕ್ರೀಡಾಪಟುಗಳ ಪೈಕಿ ಮಂಡ್ಯ ಜಿಲ್ಲೆಯಿಂದ ಎಂ.ಕೆ.ಕೃಷ್ಣಮೂರ್ತಿ ಮಾತ್ರ ಪ್ರತಿನಿಧಿಸಿದ್ದರು. ಎಂ.ಕೆ.ಕೃಷ್ಣಮೂರ್ತಿ ಅವರ ಸಾಧನೆಗೆ ಗ್ರಾಮಸ್ಥರು ಹಾಗೂ ಕ್ರೀಡಾಸಕ್ತರು ಅಭಿನಂದನೆ ಸಲ್ಲಿಸಿದ್ದಾರೆ.