ದಳವಾಯಿ ಕೋಡಿಹಳ್ಳಿ ಗ್ರಾಮದ ರಾಧಾಕೃಷ್ಣ ಆಧ್ಯಾತ್ಮ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.
ಹಲಗೂರು: ಸಮೀಪದ ದಳವಾಯಿ ಕೋಡಿಹಳ್ಳಿ ಗ್ರಾಮದ ರಾಧಾಕೃಷ್ಣ ಆಧ್ಯಾತ್ಮ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.
ಶುಕ್ರವಾರ ಬೆಳಗ್ಗೆ 9 ಗಂಟೆಗೆ ಅಭಿಷೇಕ, ಉಯ್ಯಲೆ ಮತ್ತು ಪಲ್ಲಕ್ಕಿ ಸೇವೆ ನಡೆಯಿತು. ಮಂದಿರದ ಹಿಂಭಾಗವಿರುವ ತೆರದ ಬಾವಿಯಲ್ಲಿ ಕೃಷ್ಣನ ವಿಗ್ರಹವಿರಿಸಿ ತೆಪ್ಪೋತ್ಸವ ನಡೆಸಲಾಯಿತು. ನಂತರ ಮಹಾ ಮಂಗಳಾರತಿ ನಡೆಯಿತು. ಮೈಸೂರು ಮನು, ಸಿಂಚನಾ ಮತ್ತು ತಂಡದವರಿಂದ ಭಜನೆ, ಮಧ್ಯಾಹ್ನ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು. ಮೈಸೂರು ಮಾನಸಗಂಗೋತ್ರಿಯ ಸಂಸ್ಕೃತ ಉಪನ್ಯಾಸಕ ಉಮೇಶ್ ಕುಮಾರ್ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ರಾಧಾಕೃಷ್ಣ ಆಧ್ಯಾತ್ಮ ಮಂದಿರ ಸಂಸ್ಥಾಪಕ ಸಿದ್ದಲಿಂಗಸ್ವಾಮಿ ಮಾತನಾಡಿ, ಕಲಿಯುಗದಲ್ಲಿ ಆಧ್ಯಾತ್ಮಿಕ ಜ್ಞಾನ ಅತ್ಯವಶ್ಯಕ. ಈ ಜೀವನ ಅನಿಶ್ಚಿತತೆಯ ಪಯಣವಾಗಿದ್ದು, ಏರುಪೇರುಗಳನ್ನು ಅನುಭವಿಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಮನಸ್ಥಿತಿಯನ್ನು ಸಮತೋಲನ ಕಾಯ್ದುಕೊಳ್ಳಲು ಆಧ್ಯಾತ್ಮಿಕ ಜ್ಞಾನದ ಅವಶ್ಯಕತೆ ಬಹಳ ಇದೆ. ಭಗವದ್ಗೀತೆ ಕೇವಲ ಧಾರ್ಮಿಕ ಗ್ರಂಥವಲ್ಲ. ಅದು ಪ್ರತಿಯೊಬ್ಬ ಮನುಷ್ಯನ ಜೀವನಕ್ಕೆ ಅವಶ್ಯವಿರುವ ಅಧ್ಯಾತ್ಮಿಕ ಜ್ಞಾನ ನೀಡುವ ಮಹಾನ್ ಗ್ರಂಥ. ಜೀವ ಮತ್ತು ಜಗತ್ತಿನ ಸೃಷ್ಟಿಗೆ ಕಾರಣಕರ್ತನೇ ಭಗವಂತ. ಭಗವಂತನ ಸೇವೇ ಮಾಡುವುದು ನಮ್ಮ ಜೀವನದ ಪರಮ ಗುರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಜಯಣ್ಣ, ರವೀಶ್, ದಯಾನಂದ್, ಪ್ರವೀಣ್, ಪ್ರದೀಪ್, ಸೋಮ ಇದ್ದರು.