ಮದ್ದೂರು ತಾಲೂಕು ಕೌಡ್ಲೆ ಗ್ರಾಮದ ಬೋರೆದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
- ನೂರಾರು ವರ್ಷದ ಇತಿಹಾಸವಿರುವ ದೇವಸ್ಥಾನ
- ದೇವರಿಗೆ ನಿರ್ದಿಷ್ಟ ವ್ಯಕ್ತಿಯೇ ಕೊಂಡ ಹಾಯಬೇಕೆಂಬ ನಿಯಮ ಇಲ್ಲ
ಮದ್ದೂರು: ನೂರಾರು ವರ್ಷದ ಇತಿಹಾಸ ಇರುವ ತಾಲೂಕಿನ ಕೌಡ್ಲೆ ಗ್ರಾಮದ ಪುರಾಣ ಪ್ರಸಿದ್ಧ ಬೋರೆದೇವರ ಹಬ್ಬ ಸೋಮವಾರ ಮುಂಜಾನೆ ಕೊಂಡೋತ್ಸವದೊಂದಿಗೆ ಸಂಭ್ರಮದಿಂದ ಸಂಪನ್ನಗೊಂಡಿತು. ಪುರೋಹಿತರಾದ ಪಾರ್ಥ ಸಾರಥಿ ಹಾಗೂ ಬಾಲಪ್ಪ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರೆವೇರಿದವು.
ಗ್ರಾಮದ ಬೋರೇದೇವರ ದೇವಸ್ಥಾನ ಸಂಪೂರ್ಣವಾಗಿ ಶಿಥಿಲಗೊಂಡಿತ್ತು. ನಂತರ ಕೌಡ್ಲೆ , ಕೊತ್ತತ್ತಿ ಹಾಗೂ ಅಕ್ಕಪಕ್ಕದ ಗ್ರಾಮಸ್ಥರ ನೆರೆವಿನಿಂದ ಹತ್ತಾರು ವರ್ಷದ ಹಿಂದೆ ಪುನರ್ ನಿರ್ಮಾಣಗೊಂಡು ಪ್ರತಿ ವರ್ಷ ಯುಗಾದಿಯ ನಂತರದ ಭಾನುವಾರ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಈ ಹಬ್ಬದಲ್ಲಿ ಕೌಡ್ಲೆ, ಕೊತ್ತತ್ತಿ, ಗಟ್ಟಹಳ್ಳಿ ಹಾಗೂ ಅಕ್ಕಪಕ್ಕದ ಗ್ರಾಮದ ಭಕ್ತರು ಪಾಲ್ಗೊಳ್ಳುತ್ತಾರೆ. ಕೌಡ್ಲೆ ಗ್ರಾಮದ ಯಜಮಾನರು, ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಕೊಂಡೋತ್ಸವದಲ್ಲಿ ಭಾಗವಹಿಸಿದರು.
ಇನ್ನು ದೇವರಿಗೆ ನಿರ್ದಿಷ್ಟ ವ್ಯಕ್ತಿಯೇ ಕೊಂಡ ಹಾಯಬೇಕೆಂಬ ನಿಯಮ ಇಲ್ಲ. ಭಾನುವಾರ ಹಬ್ಬವಾದರೆ ಸೋಮವಾರ ಮುಂಜಾನೆ ಪಟ್ಟಲ್ಲದಮ್ಮ ಹಾಗೂ ತೋರೆಹಳ್ಳದಮ್ಮ ದೇವರಿಗೆ ಶಿಂಷಾ ನದಿಯ ದಡದಲ್ಲಿ ಹೂ, ಹೊಂಬಾಳೆಯನ್ನು ಮಾಡುತ್ತಾರೆ. ಅಂತೆಯೇ ದೇವರನ್ನು ವಾಲಿಸುತ್ತಾರೆ. ಅಂತಹ ಸಂದರ್ಭದಲ್ಲಿ ಅಲ್ಲಿ ನೆರೆದಿರುವ ಭಕ್ತರಲ್ಲಿ ಯಾರಿಗಾದರೂ ದೇವರ ಆವಾಹನೆ ಆಗಿ ತೋರೆಹಳ್ಳದಮ್ಮನ ದೇವಸ್ಥಾನದ ಸಮೀಪ ಗೌಪ್ಯವಾಗಿ ಅಡಿಗಿಸಿಟ್ಟಿರುವ ಹೊಂಬಾಳೆಯನ್ನು ತೆಗೆದುಕೊಂಡು ಬಂದು ಕೊಂಡದಲ್ಲಿ ನಡೆಯಬೇಕು. ಇದು ಮೊದಲಿನಿಂದಲೂ ನಡೆದುಬಂದಿರುವ ವಾಡಿಕೆ. ಅದೇ ರೀತಿ ಈ ಬಾರಿಯೂ ನಡೆಯಿತು. ಕೌಡ್ಲೆ ಗ್ರಾಮದ ಹಾಲಿವಾಸ ಜೋಗಿಕೊಪ್ಪಲು ಗ್ರಾಮದ ಪಾಪಣ್ಣ ಎಂಬುವರು ಕೊಂಡ ಹಾಯ್ದರು.
ಬೋರೆದೇವರ ಹಬ್ಬ ಹಾಗೂ ಕೊಂಡೋತ್ಸವ ನಮ್ಮ ತಂದೆಯವರ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ಸಹೋದರರು, ಸಂಬಂಧಿಕರೆಲ್ಲರೂ ಸೇರಿಕೊಂಡು ಧಾರ್ಮಿಕ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ನಮ್ಮ ವಂಶಿಕರು, ಗ್ರಾಮಸ್ಥರು, ಯಜಮಾನರು ಹಾಗೂ ಕೊತ್ತತ್ತಿ ಗ್ರಾಮದ ಭಕ್ತರ ಸಹಕಾರದಿಂದ ಯಾವುದೇ ಅಡಚಣೆ ಇಲ್ಲದೇ ನಡೆದುಕೊಂಡು ಬರುತ್ತಿದೆ.