ದೊಡ್ಡರಸಿನಕೆರೆ ಗೇಟಿನ ಬಳಿ ಇರುವ ಎಸ್‌ವೈಎಸ್ ಸಮುದಾಯ ಭವನದಲ್ಲಿ ದಾರಿದೀಪ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮೋತ್ಸವದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಶಾಸಕ ಕದಲೂರು ಉದಯ್ ಅಭಿನಂದಿಸಿದರು. ಎ.ಎಸ್.ರಾಜೀವ್, ಅಣ್ಣೂರು ಮಹೇಂದ್ರ, ಎಲ್.ದಯಾನಂದ, ವಿ.ವೈ.ಆನಂದ್ ಮತ್ತಿತರರಿದ್ದರು.
ಕೆ.ಎಂ.ದೊಡ್ಡಿ: ಯಾಂತ್ರಿಕ ಯುಗದಲ್ಲಿ ಸುಗ್ಗಿ ಹಬ್ಬ ಸಂಕ್ರಾಂತಿ ಸಂಭ್ರಮ ಕೇವಲ ಸಾಮಾಜಿಕ ಜಾಲತಾಣಗಳಿಗೆ ಸಿಮೀತವಾಗಿ ಖುಷಿಪಡುವ ಹಂತಕ್ಕೆ ತಲುಪಿ ಹಬ್ಬದ ಗತ ವೈಭವವನ್ನು ಕಳೆದುಕೊಂಡಿದೆ ಎಂದು ಶಾಸಕ ಕದಲೂರು ಉದಯ್ ಬೇಸರ ವ್ಯಕ್ತಪಡಿಸಿದರು.
ಸಮೀಪದ ದೊಡ್ಡರಸಿನಕೆರೆ ಗೇಟಿನ ಬಳಿ ಇರುವ ಎಸ್‌ವೈಎಸ್ ಸಮುದಾಯ ಭವನದಲ್ಲಿ ದಾರಿದೀಪ ಫೌಂಡೇಷನ್ ವತಿಯಿಂದ ಸೋಮವಾರ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮೋತ್ಸವ ಹಾಗೂ ದಾರಿದೀಪ ರತ್ನ ಪ್ರಶಸ್ತಿ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು.
ರೈತರು ಆಧುನಿಕ ಯಾಂತ್ರಿಕ ಬೇಸಾಯಕ್ಕೆ ಮಾರುಹೋಗಿ ಎಲ್ಲದಕ್ಕೂ ಯಂತ್ರಗಳು ಅವಲಂಭಿತರಾಗಿ ರೈತರು ದುಡಿಯುವ ವರ್ಗ ಕಡಿಮೆಯಾಗುತ್ತದೆ, ಹಾಗೆಯೇ ಗ್ರಾಮಗಳಲ್ಲಿ ರೈತರು ನಗರ ಪ್ರದೇಶಗಳಿಗೆ ವಲಸೆ ಹೋಗಿ ದನ-ಕರು, ರಾಸುಗಳನ್ನು ಸಾಕದೆ ರಾಸುಗಳ ಸಂಖ್ಯೆ ಕ್ಷಿಣಿಸುತ್ತಿದೆ ಎಂದರು.
ವರ್ಷವಿಡೀ ರೈತನೊಂದಿಗೆ ಬಿಡುವಿಲ್ಲದೆ ದುಡಿದ ಆ ಪ್ರಾಣಿಗಳಿಗೆ ಒಂದೆರಡು ದಿನಗಳು ವಿರಾಮವೂ ದೊರೆತಂತಾಗುತ್ತದೆ. ಸಂಕ್ರಾಂತಿ ಹಬ್ಬವು ಗ್ರಾಮೀಣ ಸಂಸ್ಕೃತಿಯ ಸೊಗಡಿನ ಸಂಕೇತವಾಗಿದ್ದು ಇತ್ತೀಚಿನ ದಿನಗಳಲ್ಲಿ ಹಬ್ಬವು ಹಳ್ಳಿಗಾಡಿನಲ್ಲಿ ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ. ಮುಂದಿನ ಪೀಳಿಗೆಗೆ ನಾವು ಹಬ್ಬಗಳನ್ನು ಬರಿ ಫೋಟೋಗಳಲ್ಲಿ ತೋರಿಸುವ ಕ್ಯಾಲೆಂಡರ್‌ಗಳಲ್ಲಿ ಸಿಗುವ ರಜಾಕ್ಕೆ ಮಾತ್ರ ಸೀಮಿತವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಜನ ಸಾಮಾನ್ಯರಿಗೆ ನಮ್ಮ ಹಿರಿಯರು ವರ್ಷದ ಮೊದಲ ಬೆಳೆಯನ್ನು ಬೆಳದು ರಾಶಿ ಪೂಜೆ ನಡೆಸಿ ರಾಸುಗಳಿಗೆ ಕಿಚ್ಚು ಹಾಯಿಸುತ್ತಿದ್ದ ಗತ ವೈಭವ ಮರೆಯಾಗುತ್ತಿದ್ದು, ನಗರ ಪ್ರದೇಶದವರಿಗೆ ಗ್ರಾಮೀಣ ಸಂಸ್ಕೃತಿ ಮತ್ತು ಜಾನಪದ ಕಲೆಗಳನ್ನು ಪರಿಚಯಿಸುವ ಉದ್ದೇಶದಿಂದ ಸಂಕ್ರಾಂತಿ ಸಂಭ್ರಮೊತ್ಸವದಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಯೋಜನೆಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಸಂಕ್ರಾಂತಿ ಸಂಭ್ರಮದಲ್ಲಿ ಪ್ರತಿ ಮನೆಗಳಲ್ಲೂ ರಾಸುಗಳು ಇರುತ್ತಿದ್ದವು.ಆ ಕಿಚ್ಚನ್ನು ನೋಡುವುದೇ ಸಂಭ್ರಮ. ಈ ಆಧುನಿಕ ಯುಗಲ್ಲಿ ಎಲ್ಲ ನಾಪತ್ತೆಯಾಗುತ್ತಿವೆ. ರೈತ ಮಹಿಳೆಯರು ನಾಟಿ ಮಾಡುವಾಗ ಹಾಡುತ್ತಿದ್ದ ಜಾನಪದ ಶೈಲಿಯ ಹಾಡುಗಳು ಮಾಯವಾಗಿವೆ, ಹಾಡುಗಳನ್ನು ಹಾಡುವುದರಿಂದ ರೈತರ ಶ್ರಮ ಹಗುರಗೊಳಿಸಿ ಒಗ್ಗಟ್ಟಿನಿಂದ ಕೆಲಸ ಉತ್ಸುಕದಿಂದ ಮಾಡುತ್ತಿದ್ದರು. ಈಗ ಅದೆಲ್ಲ ಮಾಯವಾಗಿರುವುದು ಬೇಸರದ ಸಂಗತಿ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತಾಲೂಕು ವೈದ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ, ಮಹೇಶ್ ಚಂದ್ರಗುರು, ದೋ.ಚಿ.ಗೌಡ, ತೊರೆಚಾಕನಹಳ್ಳಿ ಶಂಕರೇಗೌಡ, ಪೈ.ಅಬ್ದುಲ್ ರಫೀಕ್ (ಜೋಬಾ ರಫೀಕ್) ಸಿ.ಎಸ್.ಮಂಜುನಾಥ್, ಎಂ.ನಂದೀಶ್, ಡಾ.ಆರ್.ರಾಘವೇಂದ್ರ, ಕೃಷ್ಣಮೂರ್ತಿ, ಮಲ್ಲುಸ್ವಾಮಿ, ನಟರಾಜು, ಸವಿತಾ ಚಿರು ಕುನ್ನಯ್ಯ, ಸಿ.ಟಿ.ರಾಜೇಂದ್ರ, ಕೆ.ಪಿ.ಅರುಣಕುಮಾರಿ, ಚೆಲುವರಾಜು, ಪಿ.ವಿ.ಮಹದೇವು, ಪತ್ರಕರ್ತ ಮಂಜುನಾಥ್ ಗಂಜಾಂ, ಡಿ.ಎಸ್.ಭಾರ್ಗವಿ, ಡಿ.ಎಂ.ಮಹೇಶ್ ಅವರಿಗೆ ದಾರಿದೀಪ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ರೈತ ಮುಖಂಡ ಅಣ್ಣೂರು ಮಹೇಂದ್ರ, ದಾರಿದೀಪ ಫೌಂಡೇಷನ್ ಅಧ್ಯಕ್ಷ ಎಲ್.ದಯಾನಂದ, ಉಪಾಧ್ಯಕ್ಷ ವಿ.ವೈ.ಆನಂದ್, ಕಾರ್ಯದರ್ಶಿ ನಳಿನಿ, ಜಂಟಿ ಕಾರ್ಯದರ್ಶಿ ಧರ್ಮೇಂದ್ರಸಿಂಗ್, ಖಜಾಂಚಿ ಎ.ಎಸ್.ಪ್ರದೀಪ್ ಮತ್ತಿತರರು ಹಾಜರಿದ್ದರು.